ಧಾರವಾಡ ಕೃಷಿ ಮೇಳ ಸಂಪನ್ನ – ನಾಲ್ಕು ದಿನದ ಮೇಳ ಯಶಸ್ವಿ

– ಮಹಾಂತೇಶ ಕಣವಿ

ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ‘ರೈತರ ಆದಾಯ ದ್ವಿಗುಣಕ್ಕೆ ತಾಂತ್ರಿಕತೆಗಳು ಘೋಷವಾಕ್ಯದೊಂದಿಗೆ ನಾಲ್ಕು ದಿನಗಳ ಕಾಲ ನಡೆದ ಧಾರವಾಡ ಕೃಷಿ ಮೇಳ ಮಂಗಳವಾರ ಸಂಪನ್ನಗೊಂಡಿದೆ. ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷದ ಬಳಿಕ ನಡೆದ ಧಾರವಾಡ ಕೃಷಿ ಮೇಳಕ್ಕೆ ವರುಣ ಸಹಕಾರ, ರೈತರ, ಕೃಷಿ ಆಸಕ್ತರ ಸಹಭಾಗಿತ್ವ, ಕೃಷಿ ವಿಜ್ಞಾನಿಗಳ ಮತ್ತು ಅಧಿಕಾರಿಗಳ ಬದ್ಧತೆಯ ಫಲದಿಂದ ಯಶಸ್ವಿಯಾಗಿದೆ.

ಮೇಳಕ್ಕೆ ಲಕ್ಷಾಂತರ ರೈತರು, ರೈತ ಮಹಿಳೆಯರು ಹಾಗೂ ಯುವ ಕೃಷಿಕರು, ಸಾರ್ವಜನಿಕರು ವಿವಿಧ ವಾಹನಗಳ ಮೂಲಕ ಆಗಮಿಸಿ, ಈ ಕೃಷಿ ಮೇಳದ ವೈಭೋಗ ಕಣ್ತುಂಬಿಕೊಂಡರು. ಕೃಷಿ ಮೇಳ ಧಾರವಾಡ ಮಾತ್ರವಲ್ಲ, ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡ ಹಾಗೂ ದೇಶದ ವಿವಿಧ ಭಾಗಗಳಿಂದಲೂ ರೈತರು, ವಿಜ್ಞಾನಿಗಳು, ಚಿಂತಕರು ಆಗಮಿಸಿದ್ದು ವಿಶೇಷವಾಗಿತ್ತು.

ಕೃಷಿ ಸಚಿವ ಬಿ.ಸಿ.ಪಾಟೀಲ ಮೇಳಕ್ಕೆ ಚಾಲನೆ ನೀಡಿ, ವೈಜ್ಞಾನಿಕ ಕೃಷಿ ಅಳವಡಿಕೆಗೆ ಸಲಹೆ ನೀಡಿದರು. ಮುಖ್ಯ ವೇದಿಕೆಯಲ್ಲಿ ನಾಲ್ಕು ದಿನ ರೈತರಿಂದ ರೈತರಿಗಾಗಿ ಕಾರ್ಯಕ್ರಮ, ನೈಸರ್ಗಿಕ ಕೃಷಿ ಗೋಷ್ಠಿ, ಕೃಷಿಯಲ್ಲಿ ಸಾಧನೆಗೈದ ಏಳು ಜಿಲ್ಲೆಗಳ ಶ್ರೇಷ್ಠ ಕೃಷಿಕರು, ಶ್ರೇಷ್ಠ ಕೃಷಿಕ ಮಹಿಳೆಯರಿಗೆ ಪ್ರಶಸ್ತಿ ನೀಡಿ, ಗೌರವಿಸಿತು.

ಕನ್ನಡ ಕೃಷಿ ಗೋಷ್ಠಿ ಮೇಳದ ಮತ್ತೊಂದು ವೈಶಿಷ್ಟ್ಯ. ಕೃಷಿ ಬಗ್ಗೆ ಕನ್ನಡದಲ್ಲಿ ಅತ್ಯುದ್ಭುತ ಲೇಖನ ಬರೆದ ನಾಡಿನ ವಿಜ್ಞಾನಿಗಳಿಗೆ ಡಾ. ಚೆನ್ನವೀರ ಕಣವಿ ಹೆಸರಿನಲ್ಲಿ ಪ್ರಶಸ್ತಿ ನೀಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಬೃಹತ್ ಹಾಗೂ ಸಣ್ಣ ಯಂತ್ರೋಪಕರಣಗಳ ಜತೆಗೆ ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸುವ ಹಿನ್ನೆಲೆಯಲ್ಲಿ ರೈತರು, ಕೃಷಿ ಯಂತ್ರೋಪಕರಣ ಸಂಸ್ಥೆಗಳು ಆವಿಷ್ಕಾರ ಮಾಡಿದ ಯಂತ್ರಗಳು ರೈತರ ಗಮನ ಸೆಳೆದವು.

ಫಲಪುಷ್ಪ ಪ್ರದರ್ಶನದಲ್ಲಿ ನೂರೆಂಟು ಹೂಗುಚ್ಛ, ತಾರಸಿ ತೋಟ, ಲಂಬ ಕೃಷಿ, ಕೀಟಗಳ ಪ್ರಪಂಚ, ಗಡ್ಡೆ-ಗೆಣಸು ಪ್ರದರ್ಶನ ಜನರನ್ನು ಸೆಳೆಯಿತು. ಇದರೊಂದಿಗೆ ಶ್ವಾನ ಪ್ರದರ್ಶನಕ್ಕೂ ಲಕ್ಷಾಂತರ ಜನ ಭೇಟಿ ನೀಡಿದರು. ಮೇಳದಲ್ಲಿ 660 ಮಳಿಗೆ ಹಾಕಲಾಗಿದ್ದು, ಈ ಪೈಕಿ ಕೃಷಿ, ಕೃಷಿಯೇತರ ವಸ್ತುಗಳ ಮಾರಾಟವೂ ಭರ್ಜರಿಯಾಗಿ ನಡೆಯಿತು.

ನಾಲ್ಕು ದಿನಗಳಲ್ಲಿ ಒಟ್ಟು 15.37 ಲಕ್ಷ ಜನರು ಮೇಳ ವೀಕ್ಷಿಸಿದ್ದು, 3.25 ಲಕ್ಷ ರೈತರು ಕೃಷಿ ಪ್ರಾತ್ಯಕ್ಷಿಕೆ ವೀಕ್ಷಿಸಿದ್ದಾರೆ. ರೂ.54 ಲಕ್ಷದ ಬಿತ್ತನೆ ಬೀಜ ಮಾರಾಟವಾಗಿವೆ. ಯಾವುದೇ ಗಲಾಟೆ, ಕಾನೂನು ಸುವ್ಯವಸ್ಥೆಯಡಿ ಮೇಳ ಸಾಂಗವಾಗಿ ನಡೆದು, ಯಶಸ್ವಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!