ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ನಿಗೂಢ ದೇಶ ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯ ಫಲಿತಾಂಶ ಇಡೀ ಜಗತ್ತಿನ ಗಮನ ಸೆಳೆದಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದ ‘ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ’ ಮತ್ತು ಅದರ ಮಿತ್ರ ಗುಂಪುಗಳು ಬರೋಬ್ಬರಿ 99.93% ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಜಯ ದಾಖಲಿಸಿವೆ.
ಕಿಮ್ ಜಾಂಗ್ ಉನ್ ಪರವಾಗಿ ಇಷ್ಟೊಂದು ದೊಡ್ಡ ಮಟ್ಟದ ಮತದಾನವಾದರೂ, ಬಾಕಿ ಉಳಿದ ಅಲ್ಪ ಪ್ರಮಾಣದ ಮತಗಳು ಯಾರ ಪಾಲಾದವು ಎಂಬ ಪ್ರಶ್ನೆ ವಿಶ್ವಾದ್ಯಂತ ಕಾಡಿತ್ತು. ಇದಕ್ಕೆ ಈಗ ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮ ‘ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ’ ವಿವರಣೆ ನೀಡಿದೆ.
ಮಾರ್ಚ್ 15 ರಂದು ನಡೆದ 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿ ಚುನಾವಣೆಯಲ್ಲಿ ಆಡಳಿತ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರತಿಯೊಂದು ಸ್ಥಾನವನ್ನೂ ಗೆದ್ದುಕೊಂಡಿದ್ದಾರೆ. ಮತದಾನದ ಪ್ರಮಾಣದಲ್ಲಿ ಉಂಟಾದ ಅಲ್ಪ ವ್ಯತ್ಯಾಸಕ್ಕೆ ಈ ಕೆಳಗಿನ ಕಾರಣಗಳನ್ನು ನೀಡಲಾಗಿದೆ:
ನೋಂದಾಯಿತ ಮತದಾರರಲ್ಲಿ ಸುಮಾರು 0.0037% ಜನರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಮತ ಚಲಾಯಿಸಲು ಸಾಧ್ಯವಾಗಿಲ್ಲ.
ಅತ್ಯಂತ ಕಡಿಮೆ ಸಂಖ್ಯೆಯ, ಅಂದರೆ ಕೇವಲ 0.00003% ರಷ್ಟು ಜನರು ಮಾತ್ರ ವೈಯಕ್ತಿಕ ಕಾರಣಗಳಿಂದ ಮತದಾನ ಪ್ರಕ್ರಿಯೆಯಿಂದ ದೂರವಿದ್ದರು ಎಂದು ವರದಿ ತಿಳಿಸಿದೆ.
ಅಂದರೆ, ಕಿಮ್ ಜಾಂಗ್ ಉನ್ ವಿರುದ್ಧ ಯಾರೂ ಮತ ಚಲಾಯಿಸಿಲ್ಲ, ಬದಲಾಗಿ ತಾಂತ್ರಿಕ ಕಾರಣಗಳಿಂದಾಗಿ ಶೇ. 100 ರಷ್ಟು ಮತದಾನವಾಗಿಲ್ಲ ಎಂಬುದು ಸರ್ಕಾರದ ವಾದ. ಉತ್ತರ ಕೊರಿಯಾದಲ್ಲಿ ಚುನಾವಣೆ ಎನ್ನುವುದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದ್ದು, ಅಲ್ಲಿ ವಿರೋಧ ಪಕ್ಷಗಳೇ ಇಲ್ಲದಿರುವುದು ಈ ರೀತಿಯ ಫಲಿತಾಂಶಕ್ಕೆ ಮುಖ್ಯ ಕಾರಣವಾಗಿದೆ.



