ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರ ವಿವಾದಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಇಲಾಖೆಗೆ ಆದೇಶಿಸಿದ್ದಾರೆ.
ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ, ಡಿಜಿಪಿ ರಾಮಚಂದ್ರ ರಾವ್ ಅವರು ತಮ್ಮ ಅಧಿಕೃತ ಕಚೇರಿಯಲ್ಲಿ ಸಮವಸ್ತ್ರ ಧರಿಸಿರುವಾಗಲೇ ಮಹಿಳೆಯೊಬ್ಬರ ಜೊತೆ ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ. ಕರ್ತವ್ಯದ ಅವಧಿಯಲ್ಲಿ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂತಹ ನಡವಳಿಕೆ ತೋರಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ‘ರನ್ಯಾರಾವ್ ಚಿನ್ನದ ಕಳ್ಳಸಾಗಣೆ’ ಪ್ರಕರಣದಲ್ಲಿಯೂ ರಾಮಚಂದ್ರ ರಾವ್ ಅವರ ಹೆಸರು ಕೇಳಿಬಂದಿತ್ತು. ಆ ಸಮಯದಲ್ಲಿ ಸರ್ಕಾರವು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿತ್ತು. ಈಗ ಕಚೇರಿಯ ಒಳಗಿನ ರಾಸಲೀಲೆ ವಿಡಿಯೋ ವೈರಲ್ ಆಗಿರುವುದು ಸರ್ಕಾರಕ್ಕೆ ಮತ್ತಷ್ಟು ಮುಜುಗರ ತಂದಿದೆ.
“ಪ್ರಾಥಮಿಕ ತನಿಖೆ ನಡೆಸಿ ಕೂಡಲೇ ವರದಿ ಸಲ್ಲಿಸಿ” ಎಂದು ಸಿಎಂ ಗೃಹ ಇಲಾಖೆಗೆ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ವರದಿ ಸಲ್ಲಿಕೆಯಾದ ಕೂಡಲೇ ಘಟನೆಯ ತೀವ್ರತೆಯನ್ನು ಆಧರಿಸಿ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡುವ ಅಥವಾ ಶಿಸ್ತುಕ್ರಮ ಜರುಗಿಸುವ ಸಾಧ್ಯತೆ ದಟ್ಟವಾಗಿದೆ.


