October 7, 2026
Wednesday, October 7, 2026
spot_img

ಪ್ರೇಮಾನಂದ ಶ್ರೀಗಳ ಭೇಟಿಗೆ ಕೋಟಿ ಕೋಟಿ ಹಣ ಪಡೆದ್ರಾ ಕೊಹ್ಲಿ? ಸತ್ಯಾಂಶ ಬಿಚ್ಚಿಟ್ಟ ವಕ್ತಾರರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಜಾಗತಿಕ ಕ್ರಿಕೆಟ್‌ನ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕೇವಲ ಕ್ರೀಡಾರಂಗದಲ್ಲಿ ಮಾತ್ರವಲ್ಲದೆ, ತಮ್ಮ ದೈವಭಕ್ತಿಗೆ ಹಾಗೂ ಆಧ್ಯಾತ್ಮಿಕ ಚಿಂತನೆಗೂ ಹೆಸರುವಾಸಿಯಾದವರು. ಕೊಹ್ಲಿ ತಮ್ಮ ಧರ್ಮಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳೊಂದಿಗೆ ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಿರುತ್ತಾರೆ. ಆದರೆ, ಇತ್ತೀಚೆಗೆ ಅವರ ಈ ಆಶ್ರಮ ಭೇಟಿಯ ಸುತ್ತ ದೊಡ್ಡದೊಂದು ಆಧಾರರಹಿತ ವಿವಾದವನ್ನು ಹುಟ್ಟುಹಾಕಲಾಗಿತ್ತು.

ಆರೋಪವೇನು?

ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ‘ಫಲಹರಿ ಮಹಾರಾಜ್’ ಎಂದೇ ಪ್ರಸಿದ್ಧರಾದ ದಿನೇಶ್ ಶರ್ಮಾ ಎಂಬುವವರು ವಿರಾಟ್ ಕೊಹ್ಲಿ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. “2023 ರಲ್ಲಿ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿದ್ದಾಗ, ರಾಜಸ್ಥಾನದ ಖಾಸಗಿ ಕಂಪನಿಯೊಂದು ಅವರನ್ನು ಆಶ್ರಮಕ್ಕೆ ಕರೆತರಲು ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು” ಎಂದು ದಿನೇಶ್ ಶರ್ಮಾ ಪ್ರತಿಪಾದಿಸಿದ್ದರು. ಅಷ್ಟೇ ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

ವಿವಾದಕ್ಕೆ ಬ್ರೇಕ್

ಈ ಸುಳ್ಳು ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ, ವಿರಾಟ್ ಕೊಹ್ಲಿ ಅವರ ಅಧಿಕೃತ ಮಾಧ್ಯಮ ವಕ್ತಾರರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದಿನೇಶ್ ಶರ್ಮಾ ಅವರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ವಕ್ತಾರರು, ಇದೊಂದು ಆಧಾರರಹಿತ ಹಾಗೂ ಸುಳ್ಳು ಸುದ್ದಿ ಎಂದು ಖಂಡಿಸಿದ್ದಾರೆ.

“ವಿರಾಟ್ ಕೊಹ್ಲಿ ಮತ್ತು ಪ್ರೇಮಾನಂದ ಮಹಾರಾಜರ ನಡುವಿನ ಬಾಂಧವ್ಯವು ಸಂಪೂರ್ಣವಾಗಿ ವೈಯಕ್ತಿಕ ನಂಬಿಕೆ, ಶ್ರದ್ಧೆ ಮತ್ತು ಭಕ್ತಿಯನ್ನು ಆಧರಿಸಿದ್ದಾಗಿದೆ. ಇದರಲ್ಲಿ ಯಾವುದೇ ಹಣಕಾಸಿನ ವಹಿವಾಟು ಅಥವಾ ಕಂಪನಿಗಳ ಪಾತ್ರವಿಲ್ಲ. ಫಲಹರಿ ಮಹಾರಾಜ್ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಮಾಧ್ಯಮ ಸಂಸ್ಥೆಗಳಿಗೆ ಹಾಗೂ ಪತ್ರಕರ್ತರಿಗೆ ಕೊಹ್ಲಿ ಅವರ ತಂಡವು ಪ್ರಮುಖ ಮನವಿಯೊಂದನ್ನು ಮಾಡಿದೆ. “ಯಾವುದೇ ವ್ಯಕ್ತಿಯ ಬಗ್ಗೆ ಅಥವಾ ವಿಷಯದ ಬಗ್ಗೆ ಸುದ್ದಿಗಳನ್ನು ಹಾಕುವ ಮುನ್ನ, ಸಂಬಂಧಪಟ್ಟ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಇಂತಹ ಆಧಾರರಹಿತ ಹೇಳಿಕೆಗಳನ್ನು ದೃಢೀಕರಿಸಿಕೊಳ್ಳದೆ ವರದಿ ಮಾಡಬಾರದು” ಎಂದು ಜವಾಬ್ದಾರಿಯುತ ವರದಿಗಾರಿಕೆಗೆ ಒತ್ತಾಯಿಸಿದ್ದಾರೆ. ಈ ಮೂಲಕ ಕೊಹ್ಲಿ ಅಭಿಮಾನಿಗಳಲ್ಲಿ ಸೃಷ್ಟಿಯಾಗಿದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

Must Read