ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಧಾರ್ಮಿಕ ಆಚರಣೆಯ ವೇಳೆ ಜಾತಿ ಬಣ್ಣ ಹಚ್ಚಿ ದ್ವೇಷ ಸೃಷ್ಟಿಸಲು ಪ್ರಯತ್ನ ಮಾಡಿದ್ದಾರೆ ಎಂಬ ದೂರಿನ ಅನ್ವಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಹಲ್ದ್ವಾನಿಯ ವಾಲ್ಮೀಕಿ ಸಮುದಾಯದ ಸದಸ್ಯ ಅಮಿತ್ ಕುಮಾರ್ ದೂರು ನೀಡಿದ್ದು, ರಾಗಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆಗಸ್ಟ್ 29ರಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಗಾ ನೀಡಿದ ಹೇಳಿಕೆಗಳು ಸಮಯದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.
ಆಗಸ್ಟ್ 8ರಂದು ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದರು. ನಂತರ ಆಗಸ್ಟ್ 11ರಂದು ಅದೇ ಸ್ಥಳದಲ್ಲಿ ಶುದ್ಧೀಕರಣ ಯಜ್ಞ ನಡೆದಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಈ ವಿಷಯವನ್ನು ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು. ಅಸ್ಪಶ್ಯತೆ ಮನೋಭಾವ ಇನ್ನೂ ಸಮಾಜದಲ್ಲಿ ಜೀವಂತವಾಗಿರುವುದು ನೋವಿನ ಸಂಗತಿ ಎಂದು ಹೇಳಿದ್ದರು. ಈ ಬೆಳವಣಿಗೆ ಕುರಿತು ಶನಿವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಶುದ್ಧೀಕರಣ ಯಜ್ಞವನ್ನು ತೀವ್ರವಾಗಿ ಖಂಡಿಸಿದ್ದರು. ಅಲ್ಲದೆ, ಕಾರ್ಯಕ್ರಮದ ಬಳಿಕ ಶುದ್ಧೀಕರಣ ನಡೆಸಿದವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದರು. ಶುದ್ಧೀಕರಣದ ಘಟನೆ ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ತಾವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದು, ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದವರನ್ನು ಅಸ್ಪೃಶ್ಯತೆ ಆಚರಿಸುವವರು ಹಾಗೂ ದಲಿತ ವಿರೋಧಿಗಳು ಎಂದು ರಾಹುಲ್ ಗಾಂಧಿ ಬಿಂಬಿಸಿದ್ದಾರೆ ಎಂದು ಅಮಿತ್ ಕುಮಾರ್ ಆರೋಪಿಸಿದ್ದಾರೆ.



