ಹೊಸ ದಿಗಂತ ಡಿಜಿಟಲ್ ಡೆಸ್ಕ್
“ಮೋದಿ ಸರ್ಕಾರದ ಸಚಿವರೇ ರಾಮಸೇತುವಿಗೆ ವೈಜ್ಞಾನಿಕ ಪುರಾವೆ ಇಲ್ಲವೆಂದು ಹೇಳಿದ್ದಾರೆ” ಎಂಬರ್ಥದ ಸುದ್ದಿಯನ್ನು ಕನ್ನಡದಲ್ಲಿಯೂ ಕೆಲವು ಜಾಲತಾಣಗಳು ಪ್ರಕಟಮಾಡಿವೆ. ಕನ್ನಡದ ಮಟ್ಟಿಗೆ ಮುಖ್ಯವಾಹಿನಿ ಮಾಧ್ಯಮ ಯಾವುದೂ ಈ ಬಗೆಯ ಸುದ್ದಿ ಮಾಡಿಲ್ಲವಾದರೂ, ಆಂಗ್ಲದಲ್ಲಿ ಟೆಲಿಗ್ರಾಫ್ ಮಾಡಿರುವ ವರದಿಯೇ ಈ ಬಗೆಯ ಸುದ್ದಿಗಳು ಹುಟ್ಟುವುದಕ್ಕೆ ಮೂಲ ಎಂಬುದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಎತ್ತಿ ತೋರಿಸಿರುವ ಅಂಶ.
ಸಂಸತ್ತಿನಲ್ಲಿ ಮೋದಿ ಸರ್ಕಾರ ಈ ಬಗೆಯ ಯಾವುದೇ ಹೇಳಿಕೆ ನೀಡಿಲ್ಲ ಎಂದಿರುವ ಸಚಿವ ಜಿತೇಂದ್ರ ಸಿಂಗ್ ಅವರು ಈ ಸಂಬಂಧ ತಾವು ಸಂಸತ್ತಿನಲ್ಲಿ ಮಾತನಾಡಿರುವ ವಿಡಿಯೋ ತುಣುಕನ್ನೇ ಲಗತ್ತಿಸಿದ್ದಾರೆ. ತಪ್ಪಾಗಿ ವರದಿ ಮಾಡಿರುವ ಟೆಲಿಗ್ರಾಫ್ ವರದಿಗಾರ ಸಹ ಕಾಂಗ್ರೆಸ್ಸಿನವರಂತೆ ಕಣ್ಣು-ಕಿವಿ ಮುಚ್ಚಿಕೊಂಡಿದ್ದಂತೆ ತೋರುತ್ತದೆ ಅಂತಲೂ ಅವರು ವ್ಯಂಗ್ಯದ ಬಾಣ ಬಿಟ್ಟಿದ್ದಾರೆ.
.@Pawankhera जैसे कांग्रेस नेताओं की आँख और कान तो शुरू से ही बंद है…और Telegraph के संवाददाता भी अपने आँख और कान संसद की चर्चा के दौरान बंद कर के बैठे थे।
कृपया आँख और कान खोल कर नीचे दिया हुआ विडियो देख लें ।https://t.co/KlfF0NC0CB https://t.co/Dwik3OANBY— Dr Jitendra Singh (@DrJitendraSingh) December 23, 2022
ವಿಡಿಯೋ ಗಮನಿಸಿದಾಗ, ಅಲ್ಲಿ ಸಚಿವರು ಹೇಳಿರುವುದರ ಸಾರವಿಷ್ಟು- “ರಾಮಸೇತು ವಿಚಾರದಲ್ಲಿ ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಳನ್ನು ಮಾಡುವುದಕ್ಕೆ ಇತಿಮಿತಿಗಳಿವೆ. ಲಂಕಾ-ಭಾರತ ಮಧ್ಯದಲ್ಲಿ ಭೂಭಾಗದ ನಿರಂತರತೆ ಇರುವುದು ಬಾಹ್ಯಾಕಾಶ ವಿಜ್ಞಾನದಿಂದಲಂತೂ ದೃಢಪಟ್ಟಿದೆ. ಇದು ಸೇತುವೆಯೇ ಆಗಿತ್ತು ಎಂದು ಸಾಬೀತುಪಡಿಸುವಷ್ಟು ಸಂಶೋಧನೆಗಳು ಈ ಹಂತದಲ್ಲಿ ಸಾಧ್ಯವಾಗಿಲ್ಲವಾದರೂ, ಅಲ್ಲಿರುವ ನಿರ್ಮಿತಿಗಳನ್ನೆಲ್ಲ ಒಟ್ಟಿಗಿರಿಸಿಕೊಂಡು ವಿಶ್ಲೇಷಿಸಿದಾಗ, ಸೇತುವೆಯಂಥ ರಚನೆಯೊಂದು ಇದ್ದದ್ದು ಸ್ಪಷ್ಟವಾಗುತ್ತದೆ.”
ಸಚಿವರ ಹೇಳಿಕೆಯಲ್ಲಿ ಎಲ್ಲಿಯೂ ರಾಮಸೇತುವಿನ ನಿರಾಕರಣೆ ಕಂಡುಬಂದಿಲ್ಲ ಎಂಬುದಂತೂ ರಾಜ್ಯಸಭೆ ಕಲಾಪದ ವಿಡಿಯೊದಲ್ಲಿ ಸ್ಪಷ್ಟವಾಗಿದೆ.