ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರು ಎಷ್ಟಿದ್ದಾರೋ ಕನ್ನಡೇತರರು ಕೂಡ ಅಷ್ಟೇ ಇದ್ದಾರೆ. ಯಲಹಂಕ ನ್ಯೂಟೌನ್‌ನಲ್ಲಿ ಇಂದು ಕನ್ನಡ ಮಾತನಾಡಿದ ಡೆಲಿವರಿ ಬಾಯ್‌ನ್ನು ಥಳಿಸಲಾಗಿದೆ. ಡೆಲಿವರಿ ಮಾಡಲು ಬಂದ ಯುವಕ ಕನ್ನಡ ಮಾತನಾಡುತ್ತಿದ್ದಾರೆ. ಹಿಂದಿ ಮಾತನಾಡುತ್ತಿಲ್ಲ ಎಂದು ಗರಂ ಆದ ಅನ್ಯರಾಜ್ಯದ ಯುವತಿಯರು ಹಾಗೂ ಯುವಕನೊಬ್ಬ ಡೆಲಿವರಿ ಬಾಯ್ ಮುಖಕ್ಕೆ ಪಂಚ್ ಮಾಡಿದ್ದಾರೆ.
ನಡುರಸ್ತೆಯಲ್ಲೇ ಹೊಡೆದಾಟ
ಇಂದು ಮುಂಜಾನೆ ನಾಲ್ಕು ಗಂಟೆಗೆ ಮೂವರು ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ್ದಾರೆ. ಡೆಲಿವರಿ ಬಾಯ್ ಬಂದ ನಂತರ ಆತನಿಗೆ ಹಿಂದಿ ಮಾತನಾಡುವಂತೆ ಬಲವಂತ ಮಾಡಿದ್ದಾರೆ. ಆತ ನನಗೆ ಹಿಂದಿ ಬರೋದಿಲ್ಲ ಎಂದು ಕನ್ನಡದಲ್ಲೇ ಹೇಳಿದ್ದಾನೆ. ಇದರಿಂದ ಗರಂ ಆದ ಯುವಕ,ಯುವತಿಯರು ಆತನ ಮುಖಕ್ಕೆ ಪಂಚ್ ಮಾಡಿ, ನೆಲಕ್ಕೆ ಬೀಳಿಸಿ ಕಾಲಿನಲ್ಲಿ ಒದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಇಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ನಮ್ಮೂರಿನಲ್ಲಿ ನಮ್ಮ ಭಾಷೆ ಮಾತನಾಡೋದಕ್ಕೂ ಹೆದರುವ ಸಮಯ ಬಂದಿದೆ. ಕನ್ನಡಿಗರ ಉಳಿವಿಕೆಗಾಗಿ ಏನಾದರೂ ಮಾಡಬೇಕಿದೆ ಎಂದು ಕಮೆಂಟ್ ಮಾಡಿದ್ದಾರೆ. ನಮ್ಮ ಊರಿನ ಭಾಷೆ ಕನ್ನಡ, ನಮ್ಮ ಊರಿನಲ್ಲಿ ಕೆಲಸ ಮಾಡಲು, ಸೆಟಲ್ ಆಗಲು ಬಂದವರು ನಮ್ಮ ಭಾಷೆ ಕಲಿಯಬೇಕು. ಅದನ್ನೂ ಮಾಡದ ಜನ ಅವರ ಭಾಷೆಯನ್ನು ನಾವು ಮಾತನಾಡಿಲ್ಲ ಎಂದು ಮನಸೋ ಇಚ್ಛೆ ವರ್ತಿಸಿದರೆ ಹೇಗೆ? ಇಂಥವರನ್ನು ಅವರ ರಾಜ್ಯಕ್ಕೆ ವಾಪಾಸ್ ಕಳಿಸಿ ಎಂದು ಆಗ್ರಹಿಸಿದ್ದಾರೆ.
ಆರೋಪಿಗಳಿಗಾಗಿ ಹುಡುಕಾಟ
ಈ ಅಮಾನವೀಯ ಘಟನೆಯ ಸಂಪೂರ್ಣ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಸದ್ಯ ಹಲ್ಲೆಗೊಳಗಾದ ಯುವಕ ನೀಡಿದ ದೂರಿನ ಮೇರೆಗೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



