ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಹಿಲ್ಟನ್ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ವಾರ್ಷಿಕ ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್’ ಕಾರ್ಯಕ್ರಮವು ತೀವ್ರ ಆತಂಕಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮದ ನಡುವೆಯೇ ನಡೆದ ಗುಂಡಿನ ದಾಳಿಯಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ನಂತರ ಶ್ವೇತಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಪರಿಸ್ಥಿತಿಯನ್ನು ವಿವರಿಸಿದರು. “ಅಧ್ಯಕ್ಷೀಯ ಪದವಿ ಇಷ್ಟೊಂದು ಅಪಾಯಗಳಿಂದ ಕೂಡಿದೆ ಎಂದು ಯಾರೂ ನನಗೆ ಮೊದಲೇ ಎಚ್ಚರಿಕೆ ನೀಡಿರಲಿಲ್ಲ. ಒಂದು ವೇಳೆ ನನ್ನ ಮಿತ್ರ ಹಾಗೂ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಈ ಬಗ್ಗೆ ಮೊದಲೇ ಸುಳಿವು ನೀಡಿದ್ದರೆ, ಬಹುಶಃ ನಾನು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಎರಡು ಬಾರಿ ಯೋಚಿಸುತ್ತಿದ್ದೆ” ಎಂದು ತಮಾಷೆ ಮಾಡಿದರು.
ಅಮೆರಿಕದ ಇತಿಹಾಸವನ್ನು ಉಲ್ಲೇಖಿಸಿ ಮಾತನಾಡಿದ ಟ್ರಂಪ್, ಅಧ್ಯಕ್ಷೀಯ ವೃತ್ತಿಯು ಜಗತ್ತಿನ ಅತ್ಯಂತ ಅಪಾಯಕಾರಿ ಉದ್ಯೋಗಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟರು. “ಇತಿಹಾಸದ ಅಂಕಿಅಂಶಗಳ ಪ್ರಕಾರ, ಸುಮಾರು 8% ಅಮೆರಿಕದ ಅಧ್ಯಕ್ಷರ ಮೇಲೆ ಗುಂಡಿನ ದಾಳಿ ನಡೆದಿದೆ ಮತ್ತು 5.8% ಅಧ್ಯಕ್ಷರು ಹತ್ಯೆಗೀಡಾಗಿದ್ದಾರೆ. ಇದು ಸಣ್ಣ ವಿಷಯವೇನಲ್ಲ” ಎಂದು ಅವರು ಗಂಭೀರವಾಗಿ ನುಡಿದರು.
ಅಮೆರಿಕದ 46 ಅಧ್ಯಕ್ಷರಲ್ಲಿ ಅಬ್ರಹಾಂ ಲಿಂಕನ್, ಜೇಮ್ಸ್ ಗಾರ್ಫೀಲ್ಡ್, ವಿಲಿಯಂ ಮೆಕಿನ್ಲಿ ಮತ್ತು ಜಾನ್ ಎಫ್ ಕೆನಡಿ ಅವರಂತಹ ಮಹಾನ್ ನಾಯಕರನ್ನು ಗುಂಡಿನ ದಾಳಿಯ ಮೂಲಕ ಹತ್ಯೆ ಮಾಡಲಾಗಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಇಷ್ಟೆಲ್ಲಾ ಸವಾಲು ಮತ್ತು ಪ್ರಾಣಭಯವಿದ್ದರೂ ದೇಶದ ಮೇಲಿನ ತಮ್ಮ ಪ್ರೀತಿ ಅಚಲ ಎಂದು ಟ್ರಂಪ್ ಸಾರಿದರು. “ನಾನು ಇಲ್ಲಿ ನನ್ನ ಕರ್ತವ್ಯ ನಿರ್ವಹಿಸಲು ಬಂದಿದ್ದೇನೆ. ಎಷ್ಟೇ ಅಡೆತಡೆಗಳು ಎದುರಾದರೂ ಅಮೆರಿಕದ ಜನರ ಸೇವೆ ಮಾಡುವುದರಲ್ಲಿ ನನಗೆ ಅಪಾರ ಹೆಮ್ಮೆ ಇದೆ” ಎಂದು ಅವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಹಿಲ್ಟನ್ ಹೋಟೆಲ್‌ನಲ್ಲಿ ಭೋಜನಕೂಟ ನಡೆಯುತ್ತಿದ್ದಾಗ ಅನಿರೀಕ್ಷಿತವಾಗಿ ಶಂಕಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದನು. ತಕ್ಷಣವೇ ಕಾರ್ಯಪ್ರವೃತ್ತರಾದ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು, ಟ್ರಂಪ್ ಮತ್ತು ಅವರ ಕುಟುಂಬ ಸದಸ್ಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದರು. ಸದ್ಯ ದಾಳಿಕೋರನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ.



