ಹೊಸದಿಗಂತ ವರದಿ ಬಾಗಲಕೋಟೆ:
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಪಡೆಯಲು ಹುಕ್ಕೇರಿಯಲ್ಲಿ ನಡೆದ ಪಂಚಮಸಾಲಿ ಸಮಾಜದವರ ಹೋರಾಟದಲ್ಲಿ ಬಣಜಿಗ ಸಮಾಜವಾಗಲಿ ಅನ್ಯ ಸಮಾಜದ ಬಗ್ಗೆ ಯಾವುದೇ ಮಾತುಗಳನ್ನು ಆಡಿಲ್ಲವೆಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸ್ಪಷ್ಟಪಡಿಸಿದರು.
ನವನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಮೀಸಲಾತಿ ಪಡೆಯಲು ಹೋರಾಟ ಮಾಡುವಾಗ ಅನ್ಯ ಸಮಾಜದವರು ಸಭೆಯಲ್ಲಿ ಬಂದು ಇಲ್ಲಸಲ್ಲದ ಮಾತುಗಳನ್ನಾಡಿ ಹೋಗಿದ್ದಾರೆ. ಹೋರಾಟ ನಡೆದ ಸ್ಥಳದಿಂದ ಕೊಲೆ ಮಾಡುತ್ತೇವೆ ಎಂದು ಕರೆ ಮಾಡುತ್ತಿದ್ದಾರೆ ಇಂತಹ ಬೆದರಿಕೆಗೆ ಬಗ್ಗುವ ಮಗ ನಾನಲ್ಲ ಎಂದರು.
ಹಿಂದೆ ನನ್ನ ಪತ್ನಿ ಲೋಕಸಭೆಯ ಚುನಾವಣೆಗೆ ನಿಂತ ಸಂದರ್ಭದಲ್ಲಿ ಮಲ್ಲಪ್ಪ ಶೆಟ್ಟರ ಬಗ್ಗೆ ಮಾತನಾಡಿದರು ಎಂದು ಜಿಲ್ಲೆಯಲ್ಲಿ ಜನರನ್ನು ದಿಕ್ಕು ತಪ್ಪಿ ಸುವ ಕೆಲಸವನ್ನು ಮಾಡಿದರು. ಈಗ ಪಟ್ಟಭದ್ರಶಕ್ತಿ ಮಾತು ಕೇಳಿ ಬಣಜಿಗ ಸಮಾಜದ ಕೆಲವರು ನನ್ನನ್ನೂ ಹಾಗೂ ಶಾಸಕಬಸವನಗೌಡ ಪಾಟೀಲ ಯತ್ನಾಳ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.
ಯಾವುದೇ ಅನ್ಯ ಸಮಾಜವನ್ನು ವೈಯಕ್ತಿಕವಾಗಿ ನಿಂದಿಸುವುದನ್ನು ಹುಕ್ಕೇರಿಯಲ್ಲಿ ನಡೆದ ಹೋರಾಟದ ಸಭೆಯಲ್ಲಿ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.