ಭಾರತದಲ್ಲಿ ಡಿಜಿಟಲ್‌ ಕರೆನ್ಸಿ: ಆರಂಭಿಕವಾಗಿ 9 ಬ್ಯಾಂಕುಗಳಿಗೆ ವಹಿವಾಟಿಗೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕ್ರಿಪ್ಟೋ ಕರೆನ್ಸಿಗಳಿಗೆ ಬದಲಾಗಿ ಭಾರತದಲ್ಲೇ ಡಿಜಿಟಲ್‌ ಕರೆನ್ಸಿ ತರಲು ಆರ್‌ಬಿಐ ಯೋಚಿಸಿದ್ದು ಆರಂಭಿಕವಾಗಿ ನವೆಂಬರ್‌ ನಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಯೋಜನೆಯ ಆರಂಭಿಕ ಹಂತದಲ್ಲಿ ಒಟ್ಟೂ ಒಂಬತ್ತು ಬ್ಯಾಂಕ್‌ಗಳಿಗೆ ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಸರ್ಕಾರಿ ಭದ್ರತೆಗಳಲ್ಲಿ ವ್ಯಾಪಾರ ಮಾಡಲು ವೇದಿಕೆಯನ್ನು ಕಲ್ಪಿಸಲಾಗಿದೆ. ಈ ವೇದಿಕೆಯನ್ನು ನೆಗೋಷಿಯೇಟೆಡ್ ಡೀಲಿಂಗ್ ಸಿಸ್ಟಮ್-ಆರ್ಡರ್ ಮ್ಯಾಚಿಂಗ್ (NDS-OM) ಎಂದು ಕರೆಯಲಾಗುತ್ತದೆ ಎಂದು ಮನಿ ಕಂಟ್ರೋಲ್‌ ವರದಿ ಮಾಡಿವೆ

“ಸರ್ಕಾರಿ ಭದ್ರತೆಗಳಲ್ಲಿ ವ್ಯಾಪಾರ ಮಾಡಲು ಆರ್‌ಬಿಐ ನಮಗೆ ಹೊಸ ವೇದಿಕೆಯನ್ನು ನೀಡಿದೆ, ಇದರಲ್ಲಿ ನಾವು ಡಿಜಿಟಲ್ ಕರೆನ್ಸಿ ಬಳಸಿ ವಹಿವಾಟು ನಡೆಸುತ್ತೇವೆ” ಎಂದು ಅಭಿವೃದ್ಧಿಯ ಬಗ್ಗೆ ತಿಳಿದಿರುವ ಮೂವರು ಅಧಿಕಾರಿಗಳು ಹೇಳಿರುವುದಾಗಿ ಮನಿ ಕಂಟ್ರೋಲ್‌ ವರದಿಯಲ್ಲಿ ಉಲ್ಲೇಖಿಸಿದೆ.

ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್‌ಎಸ್‌ಬಿಸಿ ಯೋಜನೆಯ ಮೊದಲ ವಿಭಾಗದಲ್ಲಿ ಭಾಗವಹಿಸಲು ಬ್ಯಾಂಕ್ ನಿಯಂತ್ರಕ ಆರ್‌ಬಿಐ ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ.

ಏನಿದು ಡಿಜಿಟಲ್‌ ರೂಪಾಯಿ ?
ಅಕ್ಟೋಬರ್ 7, 2022 ರಂದು ಆರ್‌ಬಿಐ ಪ್ರಕಟಿಸಿದ ಪರಿಕಲ್ಪನೆಯ ಟಿಪ್ಪಣಿಯ ಪ್ರಕಾರ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಕಾನೂನುಬದ್ಧ ಟೆಂಡರ್ ಎಂದು ವ್ಯಾಖ್ಯಾನಿಸಬಹುದು ಇದನ್ನು ಡಿಜಿಟಲ್ ರೂಪಾಯಿ ಎಂದು ಹೆಸರಿಸಲಾಗಿದೆ. ಆರ್‌ಬಿಐನ ಸಿಬಿಡಿಸಿಯು ಸಾರ್ವಭೌಮ ಕರೆನ್ಸಿಯಂತೆಯೇ ಇರುತ್ತದೆ ಮತ್ತು ಫಿಯೆಟ್ ಕರೆನ್ಸಿಗೆ ಸಮಾನವಾಗಿ ಒಂದರಿಂದ ಒಂದಕ್ಕೆ ವಿನಿಮಯ ಮಾಡಿಕೊಳ್ಳಬಹುದು ಎನ್ನಲಾಗಿದೆ. ಡಿಜಿಟಲ್ ರೂಪಾಯಿಯ ಎರಡು ಆವೃತ್ತಿಗಳನ್ನು ನೀಡಲು ಆರ್‌ಬಿಐ ಪ್ರಸ್ತಾಪಿಸಿದೆ – ಸಾಮಾನ್ಯ ಉದ್ದೇಶ ಅಥವಾ ಚಿಲ್ಲರೆ (CBDC-R) ಮತ್ತು ಸಗಟು (CBDC-W). ಚಿಲ್ಲರೆ CBDC ಅನ್ನು ಖಾಸಗಿ ವಲಯ, ಹಣಕಾಸು-ಅಲ್ಲದ ಗ್ರಾಹಕರು ಮತ್ತು ವ್ಯವಹಾರಗಳು ಸೇರಿದಂತೆ ಎಲ್ಲರೂ ಬಳಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!