ನಾಲ್ಕು ವರ್ಷ ಪದವಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನೇರವಾಗಿ ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶ: UGC

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಲ್ಕು ವರ್ಷದ ಡಿಗ್ರಿ ಓದುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ ಅಧ್ಯಯನ ನಡೆಸಬಹುದು.ಇದಕ್ಕೆ ಸ್ನಾತಕೋತ್ತರ ಪದವಿ ಪೂರೈಸಬೇಕಾದ ಅಗತ್ಯವಿಲ್ಲ ಎಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ(UGC) ಚೇರ್ಮನ್ ಜಗದೀಶ್ ಕುಮಾರ್ ಅವರು ಹೇಳಿದ್ದಾರೆ.

ಸದ್ಯ 4 ವರ್ಷದ ಪದವಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಜಾರಿಗೊಳಿಸುವವರೆಗೆ 3 ವರ್ಷದ ಪದವಿ ಕೋರ್ಸ್‌ಗಳನ್ನು ಸ್ಥಗಿತಗೊಳಿಸಲಾಗುವುದಿಲ್ಲ . ಮುಂದೆ ಮೂರು ವರ್ಷಗಳ ಆನರ್ಸ್ ಪದವಿ ಕಲಿಸಬೇಕಾ ಅಥವಾ ನಾಲ್ಕು ವರ್ಷಗಳ ಪದವಿ ನೀಡಬೇಕಾ ಎಂಬ ಕುರಿತು ವಿಶ್ವವಿದ್ಯಾಲಯಗಳೇ ನಿರ್ಧರಿಸಿಕೊಳ್ಳಬೇಕಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ವಾರದ ಆರಂಭದಲ್ಲಿ ಘೋಷಿಸಲಾದ ಪದವಿ ಕೋರ್ಸ್‌ಗಳಿಗೆ ಹೊಸ ಪಠ್ಯಕ್ರಮದ ಚೌಕಟ್ಟಿನಲ್ಲಿ ಆನರ್ಸ್ ಪದವಿ ಕಾರ್ಯಕ್ರಮವನ್ನು ನಾಲ್ಕು ವರ್ಷಗಳ ಕಾರ್ಯಕ್ರಮಗಳು ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂದೆ ನಾಲ್ಕು ವರ್ಷಗಳ ಪದವಿಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ನೇರವಾಗಿ ಪಿಎಚ್‌ಡಿ ಅಧ್ಯಯನಕ್ಕೆ ಅರ್ಹರಾಗಿರುತ್ತಾರೆ. ಅವರಿಗೆ ಯಾವುದೇ ಮಾಸ್ಟರ್ ಡಿಗ್ರಿ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರಿಂದ ಸಾಕಷ್ಟು ಲಾಭಗಳಿವೆ. ಪಿಎಚ್‌ಡಿ ಮಾಡಲು ಅವರಿಗೆ ಮಾಸ್ಟರ್ ಮಾಡಬೇಕಾದ ಅಗತ್ಯ ಇರುವುದಿಲ್ಲ. ನೀಡಲಾದ ವಿಷಯಗಳಲ್ಲಿ ಆಳವಾದ ಜ್ಞಾನ ಪಡೆಯಲು ಒಂದು ಅಥವಾ ಎರಡು ವಿಷಯಗಳನ್ನು ಮೇಜರ್ ಆಗಿ ಪಡೆದುಕೊಳ್ಳಬಹುದು. ಬಹುಶಿಸ್ತೀಯ ಕೋರ್ಸ್‌ಗಳು, ಸಾಮರ್ಥ್ಯ ವರ್ಧನೆಯ ಕೋರ್ಸ್‌ಗಳು, ಕೌಶಲ್ಯ ವರ್ಧನೆಯ ಕೋರ್ಸ್‌ಗಳು, ಮೌಲ್ಯವರ್ಧಿತ ಕೋರ್ಸ್‌ಗಳು ಮತ್ತು ಇಂಟರ್ನ್‌ಶಿಪ್‌ಗಳು ನಾಲ್ಕು ವರ್ಷದ ಪದವಿ ಕೋರ್ಸುಗಳಲ್ಲಿ ಅಂತರ್ಗತವಾಗಿರುವುದರಿಂದ, ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಪಡೆದುಕೊಳ್ಳಲು ಅಥವಾ ಉನ್ನತ ವ್ಯಾಸಂಗಕ್ಕೆ ಹೋಗಲು ಅವಕಾಶಗಳನ್ನು ಹೆಚ್ಚಿಸುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!