ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರ ನಿರ್ದೇಶಕ ನಾಗಶೇಖರ್ ಕಾರು ಅಪಘಾತಗೀಡಾಗಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ನಾಗಶೇಖರ್ ಚಾಲನೆ ಮಾಡುತ್ತಿದ್ದ ಬೆಂಜ್ ಕಾರು ಅಪಘಾತವಾಗಿದ್ದು, ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಗಶೇಖರ್ ಅವರು ತಮ್ಮ ಕಾರು ಚಾಲನೆ ಮಾಡಿಕೊಂಡು ಹೋಗುವ ವೇಳೆ ನಿಯಂತ್ರಣ ತಪ್ಪಿ ಬಸ್ ತಂಗುದಾಣದಲ್ಲಿ ನಿಂತಿದ್ದ ದೊಡ್ಡಗೊಲ್ಲರಹಟ್ಟಿ ನಿವಾಸಿ ಲಕ್ಷ್ಮೀ ಎಂಬುವವರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಾರು ಜಖಂಗೊಂಡಿದೆ.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ನಾಗಶೇಖರ್ ಅವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಠಾಣೆಗೆ ಬಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.