ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಾದ್ಯಂತ ಭಾರೀ ಕ್ರೇಜ್ ಸೃಷ್ಟಿಸಿರುವ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಆದರೆ ವಿದೇಶಿ ಆವೃತ್ತಿಗೂ, ಭಾರತೀಯ ಅವೃತ್ತಿಗೂ ವ್ಯತ್ಯಾಸವಿರಲಿದೆ. ಚಿತ್ರವನ್ನು ಪರಿಶೀಲಿಸಿರುವ ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ, ‘UA 13+’ ಪ್ರಮಾಣಪತ್ರ ನೀಡುವುದರ ಜೊತೆಗೆ 8 ಸೆಕೆಂಡ್‌ಗಳ ಪ್ರಮುಖ ಚುಂಬನದ ದೃಶ್ಯಕ್ಕೆ ಕತ್ತರಿ ಹಾಕಿದೆ.
ಆಕ್ಷೇಪಾರ್ಹ ಪದಗಳಿಗೆ ಬ್ರೇಕ್
ಕೇವಲ ರೊಮ್ಯಾಂಟಿಕ್ ದೃಶ್ಯ ಮಾತ್ರವಲ್ಲದೆ, ಸಿನಿಮಾದ ಆಡಿಯೋ ಹಾಗೂ ಸಬ್‌ಟೈಟಲ್‌ಗಳಲ್ಲಿ ಬಳಕೆಯಾಗಿದ್ದ ಕೆಲವು ಕಟು ಪದಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ನಿರ್ಮಪಕರಿಗೆ ಸೂಚಿಸಲಾಗಿತ್ತು. ಈ ಎಲ್ಲಾ ತಿದ್ದುಪಡಿಗಳ ನಂತರ ಚಿತ್ರದ ಒಟ್ಟು ಅವಧಿ (ರನ್ ಟೈಮ್) 2 ಗಂಟೆ 24 ನಿಮಿಷಗಳಿಗೆ ಕಾಯಂ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆಕ್ರೋಶ
ಸೆನ್ಸಾರ್ ಮಂಡಳಿಯ ಈ ಕಟ್ಟುನಿಟ್ಟಿನ ಕ್ರಮಕ್ಕೆ ಸಿನಿಮಾ ಪ್ರಿಯರು ಹಾಗೂ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 13 ವರ್ಷ ಮೇಲ್ಪಟ್ಟವರಿಗೆ ಸೂಕ್ತ ಎಂಬ ವರ್ಗೀಕರಣ ನೀಡಿದ ಮೇಲೆಯೂ, ದೃಶ್ಯಗಳನ್ನು ಸೆನ್ಸಾರ್ ಮಾಡುವ ಅಗತ್ಯವೇನಿತ್ತು ಎಂದು ಫ್ಯಾನ್ಸ್ ಕಮೆಂಟ್ ಮಾಡಿ ತಮ್ಮ ವಿರೋಧ ದಾಖಲಿಸುತ್ತಿದ್ದಾರೆ.



