ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧಿವೇಶನದಲ್ಲಿ ಯಾಸಿನ್ ಮಲಿಕ್ ಬಗ್ಗೆ ಚರ್ಚೆ ಮಾಡಬೇಕೆಂದು ಕೋರಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಯಾಸಿನ್ ಪತ್ನಿ ಮುಶಾಲ್ ಹುಸೈನ್ ಮಲಿಕ್ ಪತ್ರ ಬರೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಯಾಸಿನ್ ಮಲಿಕ್‌ಗೆ ಮಾತ್ರ ಸಾಧ್ಯ ಎಂದ ಪತ್ನಿ ಪತ್ರದಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನಿ ಚಿತ್ರಕಲಾ ಕಲಾವಿದೆ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಮುಶಾಲ್ ಹುಸೈನ್ ಮಾನವ ಹಕ್ಕುಗಳು ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನ ಮಂತ್ರಿಯ ವಿಶೇಷ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇತ್ತ ರಾಹುಲ್‌ಗೆ ಪತ್ರ ಬರೆದಿದ್ದಕ್ಕೆ ಬಿಜೆಪಿ ಕಿಡಿಕಾರಿದೆ. ಜಮ್ಮು ಕಾಶ್ಮೀರದಲ್ಲಿ ಅಮಾಯಕರನ್ನು ಕೊಂದವರು ಇಂದು ರಾಹುಲ್ ಗಾಂಧಿಗೆ ಪತ್ರ ಬರೆಯುತ್ತಿದ್ದಾರೆ. ಇವರೆಲ್ಲಾ ರಾಹುಲ್ ಗಾಂಧಿ ಬೆಂಬಲ ಕೇಳುತ್ತಿರುವುದು ಯಾಕೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ.
ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಯಾಸಿನ್ ಮಲಿಕ್ ಅವರ ಪತ್ನಿ ರಾಹುಲ್ ಗಾಂಧಿಗೆ ಪತ್ರ ಬರೆದಿರುವುದರಲ್ಲಿ ಆಶ್ಚರ್ಯ ಏನಿಲ್ಲ. ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ವಾಯುಪಡೆಯ ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಮಲಿಕ್ ದೋಷಿಯಾಗಿದ್ದಾನೆ. ಡಾ ಮನಮೋಹನ್ ಸಿಂಗ್ ಆತನನ್ನು ತಮ್ಮ ಸಲಹೆಗಾರರನ್ನಾಗಿ ನೇಮಿಸಿದ್ದರು ಮತ್ತು ದೆಹಲಿ ಮಾಧ್ಯಮಗಳು ಆತನನ್ನು ‘ಯೂತ್ ಐಕಾನ್’ ಎಂದು ಗೌರವಿಸುತ್ತಿವೆ. ಕಾಂಗ್ರೆಸ್ ಯಾವಾಗಲೂ ಭಯೋತ್ಪಾದಕರ ಜೊತೆ ನಿಂತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥ ಯಾಸಿನ್ ಮಲಿಕ್‌ನನ್ನು ದೇಶದ್ರೋಹ ಆರೋಪದ ಅಡಿ ಎನ್‌ಐಎ ಬಂಧಿಸಿದೆ. ಜಮ್ಮು ಕಾಶ್ಮೀರದಲ್ಲಿ ಪಂಡಿತರ ನರಮೇಧ ಪ್ರಕರಣದಲ್ಲಿ ಭಾಗಿಯಾಗಿರುವ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಈತನಿಗೆ ಗಲ್ಲು ಶಿಕ್ಷೆ ವಿಧಿಸುಂತೆ ಎನ್‌ಐಎ ಕೋರ್ಟ್ ಮನವಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್ ಮಲಿಕ್ ದೆಹಲಿ ಹೈಕೋರ್ಟ್‌ನಲ್ಲಿ ವಾದಿಸುತ್ತಿದ್ದಾನೆ.