ಹೊಸದಿಗಂತ ಡಿಜಿಟಲ್ ಡೆಸ್ಕ್:
ತೀವ್ರ ವಿವಾದಕ್ಕೆ ಕಾರಣವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಥವಾ ಜಾತಿ ಗಣತಿ ವರದಿ ಅನುಷ್ಠಾನದ ಸಂಬಂಧ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.
ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಬಗ್ಗೆ ಚರ್ಚಿಸಲಾಗಿದ್ದು, ಜಾರಿಗೊಳಿಸುವ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದೆಂದು ನಿರ್ಧರಿಸಲಾಯಿತು.
ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಲಕೋಟೆ ಓಪನ್ ಮಾಡಿ, ಸಚಿವರ ಕೈಗೆ ನೀಡಿದರು. ಬಳಿಕ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಸಂಪುಟ ಸಹೋದ್ಯೋಗಿಗಳ ಅಭಿಪ್ರಾಯ ಆಲಿಸಿದ ಸಿದ್ದರಾಮಯ್ಯ, ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಬಂದರು.
ಜಾತಿ ಗಣತಿ ವರದಿ ಕುರಿತು ಚರ್ಚಿಸಲು ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಜಾತಿ ಗಣತಿ ವರದಿ ಜಾರಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.
ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಜಾತಿ ಗಣತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಫೆಬ್ರವರಿ 29, 2024 ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಆದರೆ ಈ ವರದಿಗೆ ಕಾಂಗ್ರೆಸ್‌ನಲ್ಲೇ ಆಂತರಿಕವಾಗಿ ವಿರೋಧ ವ್ಯಕ್ತವಾಗಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ನಾಯಕರುಗಳು ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.