ಕೊಡಗು ವೈದ್ಯಕೀಯ ಸಂಸ್ಥೆಗೆ ಆರೋಗ್ಯ ಪರಿಕರ ವಿತರಣೆ

ಹೊಸದಿಗಂತ ವರದಿ, ಕೊಡಗು:

ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಎಕ್ಸೊಆನ್ ಮೊಬೈಲ್ ಕಂಪನಿ ಸಂಯುಕ್ತಾಶ್ರಯದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಗೆ ಅಗತ್ಯವಾದ ಕೋವಿಡ್-19 ಆರೋಗ್ಯ ಪರಿಕರಗಳನ್ನು ನೀಡಲಾಯಿತು.
ಸಂಸ್ಥೆಯ ಮುಖ್ಯಸ್ಥರಾದ ಕೆ.ಸತೀಶ್ ಅವರ ನೇತೃತ್ವದಲ್ಲಿ 6 ಲಕ್ಷ ರೂ. ಮೌಲ್ಯದ ಐಸಿಯು ಬೆಡ್‍ಗಳು, ಐಸಿಯು ಮಾನಿಟರ್’ಗಳು ಹಾಗೂ ಆರೋಗ್ಯ ಪರಿಕರಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭ ಮುಖ್ಯ ವೈದ್ಯಾಧಿಕಾರಿ ಡಾ.ಮಂಜುನಾಥ್, ವೈದ್ಯಕೀಯ ಕಾಲೇಜಿನ ನಿರ್ದೇಶಕರು ಮತ್ತು ಡೀನ್ ಡಾ. ಕೆ.ಬಿ.ಕಾರ್ಯಪ್ಪ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಪ್ರಮುಖರಾದ ದರ್ಶನ್ ಹಾಜರಿದ್ದರು.
65 ಕೋಟಿ ರೂ. ಮೌಲ್ಯದ ಪರಿಕರ ವಿತರಣೆ: ಸಂಸ್ಥೆಯು ಇಲ್ಲಿಯವರೆಗೆ ಸುಮಾರು 65 ಕೋಟಿ ರೂ. ಮೌಲ್ಯದ ಅಗತ್ಯ ಆರೋಗ್ಯ ಪರಿಕರಗಳನ್ನು ವೈದ್ಯರು, ಪೊಲೀಸರು, ಪೌರಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ವಿತರಣೆ ಮಾಡಿದೆ. ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ನೀಡಿದೆ.
ಅಲ್ಲದೆ ವಿಕಲಚೇತನರು, ವಲಸೆ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ಬಡಕುಟುಂಬಗಳಿಗೆ ರ್ಯಾಪಿಡ್ ರೆಸ್ಪಾನ್ಸ್ ರಿಲೀಫ್ ಕಿಟ್, ಮಧ್ಯಾಹ್ನ ಮತ್ತು ರಾತ್ರಿ ಬಿಸಿ ಊಟದ ವ್ಯವಸ್ಥೆ, ಹ್ಯಾಂಡ್ ಸ್ಯಾನಿಸ್ಟೇಜರ್’ಗಳು, ಮಾಸ್ಕ್’ಗಳನ್ನು ವಿತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಮರ್ಥನಂ ಅಂಗವಿಕಲರ ಸಂಸ್ಧೆಯು 1997 ರಿಂದ ಭಾರತದಲ್ಲಿ ವಿಕಲಚೇತನರು ಮತ್ತು ಅವಕಾಶ ವಂಚಿತರ ಸಬಲೀಕರಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಗುಣಮಟ್ಟದ ಶಿಕ್ಷಣ, ವಸತಿ ಸೌಲಭ್ಯ, ಪೌಷ್ಟಿಕ ಆಹಾರ, ವೃತ್ತಿಪರ ತರಬೇತಿ ಮತ್ತು ಪುನರ್ವಸತೀಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಕಲಚೇತನರು ವೈಯಕ್ತಿಕ ಸ್ವಾವಲಂಬನೆಯನ್ನು ಸಾಧಿಸಲು ಮತ್ತು ಸಮಾಜದಲ್ಲಿ ಪ್ರಮುಖ ಹೆಜ್ಜೆಯನ್ನಿಡಲು ಸಹಾಯ ಮಾಡುವ ಸಲುವಾಗಿ ಕಾರ್ಯನಿರ್ವಹಿಸುತ್ತಿದೆ.
ಸಮರ್ಥನಂ ಅಂಗವಿಕಲರ ಸಂಸ್ಥೆಯ ರೂವಾರಿಗಳಾದ ಡಾ.ಮಹಾಂತೇಶ್ ಅವರ ನೇತೃತ್ವದಲ್ಲಿ ನಡೆಸುವ ವಸತಿ ಶಾಲೆಗಳಲ್ಲಿ ಸುಮಾರು 5 ಸಾವಿರ ವಿಕಲಚೇತನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ವಿವಿಧ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಅಲ್ಲದೆ ವಿಶೇಷವಾಗಿ ಅಂಧರ ಕ್ರಿಕೆಟ್ ಪಂದ್ಯಗಳನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಈ ಸೇವೆಯನ್ನು ಪರಿಗಣಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!