ಕೆಐಎಡಿಬಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಭೂ ಪರಿಹಾರ ವಿತರಣೆ ಸುಲಭವಾಗಿದೆ: ಸಚಿವ ನಿರಾಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆಂಗಳೂರು: ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದಾಗಿ ಇನ್ಮುಂದೆ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ನೀಡುವ ರೈತರಿಗೆ ಪರಿಹಾರ ವಿತರಿಸಲು ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರತ್ಯೇಕ ಕಾಯ್ದೆಗಳಿದ್ದವು. ಇತ್ತೀಚೆಗೆ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರೈತರಿಗೆ ಯಾವುದೇ ಸಮಸ್ಯೆಗಳೆದುರಾಗದಂತೆ ಪರಿಹಾರ ನೀಡಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.
ಹೊಸ ಭೂ ಸ್ವಾದೀನ ಕಾಯ್ದೆ 2013ರ ಅನ್ವಯ ಭೂ ಪರಿಹಾರ ಒದಗಿಸುವ ಸಂಬಂಧ ಕೆಐಎಡಿಬಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ಪರಿಹಾರ ವಿತರಣೆಯಲ್ಲಿ ವಿಳಳಬವಾಗುವುದಿಲ್ಲ ಎಂದರು.
ಕೆಐಎಡಿಬಿ ಕಾಯ್ದೆ ಕಾಲಂ 28/4 ಅಡಿ ಅಂತಿಮ ಅಸೂಚನೆ ಹೊರಡಿಸಿ ಸ್ವಾಧೀನಕ್ಕೆ ಪಡೆದ ಜಮೀನಿಗೆ ದರ ನಿಗದಿಪಡಿಸುವ ಸಂಬಂಧ ಆ ಪ್ರದೇಶದ ಜಿಲ್ಲಾಧಿಕಾರಿ / ಕೆಐಎಡಿಬಿಯ ವಿಶೇಷ ಅಧಿಕಾರಿ, ಭೂ ದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲಿ ಭೂ ಮಾಲೀಕರದೊಂದಿಗೆ ಸಮಾಲೋಚಿಸಿ ದರ ನಿಗದಿ ಮಾಡಲಾಗುವುದು ಎಂದು ನಿರಾಣಿ ಹೇಳಿದರು..
ಕೆಐಎಡಿಬಿ ವತಿಯಿಂದ ಭೂ ಸ್ವಾಧೀನಪಡಿಸಿದ ಜಮೀನಿಗೆ ನೀಡಉವ ಪರಿಹಾರ ಮೊತ್ತವನು ಮೀರದಂತೆ ರೈತರು ಕೃಷಿ ಜಮೀನನ್ನು ಖರೀದಿಸಿದ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ಶೇ.50ರಷ್ಟು ರಿಯಾಯ್ತಿ ಮತ್ತು ನೋಂದಣಿ ಶುಲ್ಕದಲ್ಲಿ ಸಂಪೂರ್ಣ ವಿನಾಯ್ತಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಜಮೀನುಗಳಿಗೆ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ಖಾತೆದಾರರು/ಹಿತಾಸಕ್ತದಾರರಿಗೆ ಆರ್‍ಟಿಜಿಎಸ್ ಮುಖಾಂತರ ಭೂಮಾಲೀಕರ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ನಿರಾಣಿ ಅವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!