ಹೊಸದಿಗಂತ ವರದಿ, ಕಾರ್ಕಳ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಬುಧವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸುವುದರೊಂದಿಗೆ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಉದ್ಯಮಿ ಭರತ್ ಹೆಗ್ಡೆ ಪಳ್ಳಿ ಅವರು ಈ ಬಾರಿಯೂ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು. ದೇಶ ಉತ್ತಮ ಪಥದಲ್ಲಿ ಸಾಗಬೇಕಾದರೆ ಪ್ರತಿಯೊಬ್ಬರೂ ಶಿಕ್ಷತರಾಗಬೇಕು. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಸಮಾಜದಿಂದ ಆಗಬೇಕು ಎಂದು ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಬಂಗೇರ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೂ ಸರಿಯಾದ ಅವಕಾಶಗಳು ದೊರೆಯಬೇಕು. ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದರು.
ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಬಡ ಕುಟುಂಬಗಳ ಮಕ್ಕಳೇ ಸರಕಾರಿ ಶಾಲೆಗೆ ಆಗಮಿಸುತ್ತಿದ್ದು, ನೋಟ್ ಬುಕ್ ಸೇರಿದಂತೆ ಇತರ ಶಾಲಾ ಸಾಮಗ್ರಿ ದೊರೆತಾಗ ಅವರ ಕಲಿಕೆಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಭರತ್ ಶೆಟ್ಟಿಯವರ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದು ಪ್ರಭಾಕರ ಬಂಗೇರ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಮುಖರಾದ ರಘುನಾಥ್ ಶೆಟ್ಟಿ ಪಳ್ಳಿ ದೊಡ್ಡಮನೆ , ಶೇಖರ ಶೆಟ್ಟಿಕಾವೇರಿ ಬೆಟ್ಟು ಪಳ್ಳಿ, ಮನೋಹರ ಶೆಟ್ಟಿ ಮಾಯಬೆಟ್ಟು, ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಅಮೀನ್, ಸದಸ್ಯ ಶ್ರೀಕಾಂತ್ ಪ್ರಭು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ನಾಗರತ್ನ ಸ್ವಾಗತಿಸಿದರು. ಶಿಕ್ಷಕಿ ಜುಸ್ತಿನಾ ವಂದಿಸಿದರು. ಶಿಕ್ಷಕಿ ಚಿತ್ರಾಕ್ಷಿ ಕಾರ್ಯಕ್ರಮ ಸಂಯೋಜಿಸಿದರು.