August 17, 2026
Monday, August 17, 2026
spot_img

ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ‘ಲೋಕಾ’ ಬಲೆಗೆ ಬಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಹೊಸದಿಗಂತ ವರದಿ ಗದಗ

ಗದಗ: ಹೊರಗುತ್ತಿಗೆ ಆಧಾರದ ಉದ್ಯೋಗ ನೀಡಲು ಚಾಲಕನ ಮೂಲಕ 15,000 ರೂ. ಲಂಚ ಪಡೆಯುತ್ತಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫಿಕಾ ಹಳ್ಳೂರ ಹಾಗೂ ಚಾಲಕ ಮೌಲಾನಾ ಅವರನ್ನು ವಶಕ್ಕೆ ಪಡೆಯಲಾಗಿದೆ.

ಬಾಲಮಂದಿರದಲ್ಲಿ ಖಾಲಿಯಿದ್ದ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಳ್ಳಲು ಯುವಕನೊಬ್ಬ ಅರ್ಜಿ ಸಲ್ಲಿಸಿದ್ದನು. ಈ ಹುದ್ದೆಯನ್ನು ಕೊಡಿಸಲು ಮಕ್ಕಳ ರಕ್ಷಣಾಧಿಕಾರಿ ರಫಿಕಾ ಹಳ್ಳೂರು ಆತನ ಬಳಿ 30,000 ರೂ ಲಂಚದ ಬೇಡಿಕೆ ಇಟ್ಟಿದ್ದರು. ಸುದೀರ್ಘ ಮಾತುಕತೆಯ ನಂತರ ಕೊನೆಗೆ 15,000 ರೂ.  ಹಣ ನೀಡಲು ಡೀಲ್ ಕುದುರಿಸಲಾಗಿತ್ತು.

ಲಂಚ ನೀಡಲು ಇಷ್ಟವಿಲ್ಲದ ಅಭ್ಯರ್ಥಿ ಈ ಬಗ್ಗೆ ತಕ್ಷಣವೇ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.

ಇದನ್ನೂ ಓದಿ:

ಮಹಿಳಾ ಮತ್ತು ಮಕ್ಕಳ ತಾಲೂಕು ಕಚೇರಿಯಲ್ಲಿ ಅಧಿಕಾರಿಯ ಸೂಚನೆಯಂತೆ ಅವರ ಚಾಲಕ  ಮೌಲಾನಾ ಅಭ್ಯರ್ಥಿಯಿಂದ 15,000 ರೂ. ಹಣವನ್ನು ಸ್ವೀಕರಿಸುತ್ತಿದ್ದನು. ಈ ವೇಳೆ ತಕ್ಷಣವೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಚಾಲಕ ಮೌಲಾನಾನನ್ನು ಹಣ ಸಮೇತ ವಶಕ್ಕೆ ಪಡೆದು, ಲಂಚಕ್ಕೆ ಸೂಚನೆ ನೀಡಿದ್ದ ಅಧಿಕಾರಿ ರಫಿಕಾ ಹಳ್ಳೂರು ಅವರನ್ನೂ ವಶಕ್ಕೆ ಪಡೆದಿದ್ದಾರೆ.

ಪ್ರಸ್ತುತ ಲೋಕಾಯುಕ್ತ ಅಧಿಕಾರಿಗಳ ತಂಡವು ಮಕ್ಕಳ ರಕ್ಷಣಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಯಲ್ಲಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !