ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮನವಿ

ಹೊಸದಿಗಂತ ವರದಿ ಚಿತ್ರದುರ್ಗ:
೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ಆಗಸ್ಟ್ ೧೩ ರಿಂದ ೧೫ ರವರೆಗೆ ಹಮ್ಮಿಕೊಂಡು ಎಲ್ಲಾ ಮನೆಗಳು, ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ಧ್ವಜವನ್ನು ಹಾರಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳ ಕಾರಣದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಅದಕ್ಕೆ ಕಾರಣವಾದ ಎಲ್ಲರನ್ನು ಸದಾ ಸ್ಮರಿಸುವುದು ಹಾಗೂ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇಂದಿನ ನಮ್ಮ ಸಂಭ್ರಮಕ್ಕೆ ತಳಪಾಯವಾಗಿ, ಮೆಟ್ಟಿಲುಗಳಾಗಿ ತಮ್ಮ ಜೀವ-ಜೀವನ ತ್ಯಾಗಮಾಡಿದ ಎಲ್ಲರನ್ನು ಮರೆಯದೇ ಸದಾ ಸ್ಮರಿಸುತ್ತಾ ಭವ್ಯ ಭಾರತವನ್ನು ಕಟ್ಟುವಲ್ಲಿ ನಮ್ಮ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸಬೇಕಿದೆ. ಸ್ವಾತಂತ್ರ್ಯದ ೭೫ರ ಸಂಭ್ರಮವನ್ನು ವೈವಿದ್ಯಮಯವಾಗಿ ಆಚರಿಸಲಾಗುತ್ತಿದೆ.

ಹರ್ ಘರ್ ತಿರಂಗಾ ಎಂಬ ಘೋಷವಾಕ್ಯದೊಂದಿಗೆ ದೇಶದ ಪ್ರತಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿಯನ್ನು ಬಿಂಬಿಸುವ ಮೂಲಕ ನಮ್ಮ ರಾಷ್ಟ್ರಪ್ರೇಮವನ್ನು ಅಭಿವ್ಯಕ್ತಗೊಳಿಸುವಂತೆ ಕರೆ ನೀಡಿದ್ದಾರೆ.
ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಗ್ರಾಮಗಳ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಅಭಿಯಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳವುದು.ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳು, ಸರ್ಕಾರಿ ಕಚೇರಿ ಕಟ್ಟಡಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳು, ಕೈಗಾರಿಕೆಗಳು, ವಸತಿ ಸಮುಚ್ಚಯಗಳ ಕಟ್ಟಡಗಳ ಮೇಲೆ ಧ್ವಜ ಹಾರಿಸಲು ಕ್ರಮವಹಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಧ್ವಜಗಳು ಮಾರಾಟಕ್ಕೆ ಲಭ್ಯವಿದೆ. ಧ್ವಜ ಒಂದಕ್ಕೆ ರೂ.೨೨ರಂತೆ ಧ್ವಜಗಳನ್ನು ಸಾರ್ವಜನಿಕರು ತಮ್ಮ ಹಣದಿಂದ ಖರೀದಿಸಿ ಅವುಗಳನ್ನು ಹಾರಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೆರೆಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!