ದೈಹಿಕ ಸಂಬಂಧ ಇಲ್ಲ ಎಂಬ ಮಾತ್ರಕ್ಕೆ ಡೈವೋರ್ಸ್​ ನೀಡಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಹೈಕೋರ್ಟ್ ಇಂದು ಮಹತ್ವದ ಆದೇಶವನ್ನು ನೀಡಿದ್ದು, ದಂಪತಿ ವಿಚ್ಛೇದನ ಪಡೆಯಬೇಕಾದರೆ ಕನಿಷ್ಠ ಒಂದು ವರ್ಷ ದಾಂಪತ್ಯ ಜೀವನ ನಡೆಸಿರಬೇಕು ಎಂದು ಹೇಳಿದೆ.
ಉತ್ತರಾಖಂಡ ದಂಪತಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಆದರೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನಿರಾಕರಿಸಿದ ಕಾರಣದಿಂದಾಗಿ ಇಬ್ಬರೂ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರಿಬ್ಬರೂ ಏಪ್ರಿಲ್ 4, 2021ರಲ್ಲಿ ಹಿಂದು ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ಕೆಲವೇ ಕೆಲವು ದಿನಗಳಲ್ಲಿ ಕೆಲವೊಂದು ಸಮಸ್ಯೆಗಳ ಕಾರಣದಿಂದ ಬೇರೆ ಬೇರೆಯಾಗಿದ್ದರು. ಏಪ್ರಿಲ್ 14, 2021ರಿಂದ ಬೇರೆ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು. ಜುಲೈ 2021ರಂದು ಪತ್ನಿ ತನ್ನ ತವರು ಮನೆಗೆ ತೆರಳಿದ್ದರು.
ಇಬ್ಬರ ನಡುವೆ ದೈಹಿಕ ಸಂಬಂಧವಿಲ್ಲ. ಇದನ್ನೇ ವಿಶೇಷ ಪ್ರಕರಣವೆಂದು ಪರಿಗಣಿಸಿ ವಿಚ್ಛೇದನ ನೀಡಬೇಕೆಂದು ಹೈಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್​​ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ವಿಭಾಗೀಯ ಪೀಠವು ವಿಚ್ಛೇದನವನ್ನು ನೀಡಲು ಕೌಟುಂಬಿಕ ನ್ಯಾಯಾಲಯ ನಿರಾಕರಿಸಿದ ಅರ್ಜಿಯನ್ನು ಎತ್ತಿಹಿಡಿದಿದೆ.
ದಂಪತಿ ಮಧ್ಯೆ ದೈಹಿಕ ಸಂಬಂಧ ಇಲ್ಲ ಎಂಬುದನ್ನು ವಿಚ್ಛೇದನಕ್ಕೆ ಪರಿಗಣಿಸಬಹುದು. ಆದರೆ ಒಂದು ವರ್ಷ ದಾಂಪತ್ಯ ಪೂರೈಸದ ದಂಪತಿಗೆ ಇದೇ ಕಾರಣದ ಆಧಾರದ ಮೇಲೆ ವಿಚ್ಛೇದನ ನೀಡಲು ಸಾಧ್ಯವಿಲ್ಲ. ದೈಹಿಕ ಸಂಬಂಧವಿಲ್ಲ ಎಂಬುದನ್ನು ಕ್ರೂರತ್ವ ಎಂದು ಪರಿಗಣಿಸಬಹುದೇ ವಿನಃ, ವಿಶೇಷ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!