ಕೌಟುಂಬಿಕ ಕಲಹದಿಂದ ವಿಚ್ಛೇದನ: ಪತಿಗೆ ಪತ್ನಿಯೇ ಜೀವನಾಂಶ ಕೊಡಲು ಕೋರ್ಟ್‌ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಚ್ಛೇದನದ ಬಳಿಕ ನಿರುದ್ಯೋಗಿ ಪತಿಗೆ ಪ್ರತಿ ತಿಂಗಳು 5 ಸಾವಿರ ರೂ. ಜೀವನಾಂಶ ನೀಡುವಂತೆ ಬ್ಯೂಟಿ ಪಾರ್ಲರ್‌ ಹೊಂದಿರುವ ಪತ್ನಿಗೆ ಆದೇಶಿಸಿ ಮಧ್ಯ ಪ್ರದೇಶದ ಇಂದೋರ್‌ನ ಕೌಟುಂಬಿಕ ನ್ಯಾಯಾಲಯ (Indore family court)ವು ಮಹತ್ವದ ತೀರ್ಪು ನೀಡಿದೆ.

ಪತ್ನಿಯ ಒತ್ತಾಯದ ಮೇರೆಗೆ ಕಾಲೇಜು ತೊರೆದು ನಿರುದ್ಯೋಗಿಯಾಗಿದ್ದೆ. ಆದರೆ ತನ್ನ ಪತ್ನಿ ನಂದಿನಿ (22) ಇಂದೋರ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ ಎಂದು 23 ವರ್ಷದ ಅಮನ್ ಕುಮಾರ್ ನೀಡಿರುವ ಹೇಳಿಕೆಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಈ ವಿಶೇಷ ತೀರ್ಪು ಪ್ರಕಟಿಸಿದೆ.

ಅಮನ್‌ ಪರ ವಾದ ಮಂಡಿಸಿದ ವಕೀಲರು, ನಾವು ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ. ಜೀವನಾಂಶವಲ್ಲದೆ ವ್ಯಾಜ್ಯ ಮುಂದುವರಿಸುವುದಕ್ಕೆ ಸಂಬಂಧಿಸಿದ ವೆಚ್ಚವನ್ನೂ ನೀಡುವಂತೆ ನಂದಿನಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

ಉಜ್ಜಯಿನಿ ಮೂಲದ ಅಮನ್‌ಗೆ ಸ್ನೇಹಿತರೊಬ್ಬರ ಮುಖಾಂತರ 2020ರಲ್ಲಿ ನಂದಿನಿಯ ಪರಿಚಯವಾಗಿತ್ತು. ನಂತರ ನಂದಿನಿ ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಅಮನ್‌ ಇದಕ್ಕೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿರಲಿಲ್ಲ. ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಂದಿನಿ ಬೆದರಿಕೆ ಒಡ್ಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅಮನ್‌ 2021ರ ಜುಲೈಯಲ್ಲಿ ಆರ್ಯ ಸಮಾಜ ಮಂದಿರದಲ್ಲಿ ನಂದಿನಿಯನ್ನು ವರಿಸಿದ್ದರು. ಬಳಿಕ ಅವರು ಇಂದೋರ್‌ನಲ್ಲಿ ಜೀವನ ಸಾಗಿಸಲು ಆರಂಭಿಸಿದ್ದರು ಎಂದು ಮನೀಷ್‌ ಪ್ರಕರಣದ ಹಿನ್ನೆಲೆ ವಿವರಿಸಿದ್ದಾರೆ.

ಮದುವೆ ಬಳಿಕ ನಂದಿನಿಯ ಮನೆಯವರು ತೊಂದರೆ ಕೊಡಲಾರಂಭಿಸಿದರು. ಮಾತ್ರವಲ್ಲ ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳ್ಳುವಂತೆ ಮಾಡಿದರು. ಹೀಗಾಗಿ ಕೆಲವೇ ದಿನಗಳಲ್ಲಿ ಅಂದರೆ ಸೆಪ್ಟೆಂಬರ್‌ನಲ್ಲಿ ಪೋಷಕರ ಮನೆಗೆ ಮರಳಿದೆ. ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದೆವು ಎಂದು ಅಮನ್‌ ತಿಳಿಸಿದ್ದಾರೆ.

ಅತ್ತ ಅಮನ್‌ ಪೋಷಕರ ಮನೆಗೆ ತೆರಳಿದಾಗ ನಂದಿನಿ ನಾಪತ್ತೆಯ ದೂರು ದಾಖಲಿಸಿದ್ದರು. ಇತ್ತ ಅಮನ್‌ ಉಜ್ಜಯಿನಿ ಪೊಲೀಸ್‌ ಠಾಣೆಗೆ, ನಂದಿನಿ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಜತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಜೀವನಾಂಶವನ್ನು ಕೋರಿದ್ದರು. ಇದಕ್ಕೆ ಪ್ರತಿಯಾಗಿ 2021ರ ಡಿಸೆಂಬರ್‌ನಲ್ಲಿ ಮತ್ತೊಮ್ಮೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಂದಿನಿ ಅಮನ್‌ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ನೀಡಿದ್ದರು. 2023ರ ಡಿಸೆಂಬರ್‌ನಲ್ಲಿ ಅಮನ್‌ ಇಂದೋರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತನ್ನ ಮದುವೆಯನ್ನು ಅಸಿಂಧು ಎಂದು ಪರಿಗಣಿಸುವಂತೆ ಕೋರಿದ್ದರು. ಫೆಬ್ರವರಿ 21ರಂದು ನಡೆದ ವಿಚಾರಣೆಯ ಸಮಯದಲ್ಲಿ ನಂದಿನಿ ತಾನು ಅಮನ್ ಅವರೊಂದಿಗೆ ವಾಸಿಸಲು ಇಚ್ಛಿಸುವುದಾಗಿ ತಿಳಿಸಿದ್ದರು.ತಾನು ನಿರುದ್ಯೋಗಿ ಮತ್ತು ಅಮನ್‌ ಉದ್ಯೋಗದಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ನಂದಿನಿ ಸುಳ್ಳು ಮಾಹಿತಿ ನೀಡಿದ್ದರು. ಅಲ್ಲದೆ ಅವರ ಹೇಳಿಕೆಯಲ್ಲಿ ಅನೇಕ ಗೊಂದಲಗಳಿರುವುದನ್ನು ಗಮನಿಸಿ ನ್ಯಾಯಾಲಯ ನಂದಿನಿ ಅರ್ಜಿಯನ್ನು ತಳ್ಳಿ ಹಾಕಿದೆ. ಅಲ್ಲದೆ ಕೋರ್ಟ್‌ ತೀರ್ಪು ನೀಡಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!