ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಜನರು ದೀಪಾವಳಿಯಂದು ಬೆಳಗ್ಗೆ 6 ರಿಂದ 7 ರವರೆಗೆ ಮತ್ತು ಸಂಜೆ 7 ರಿಂದ 8 ರವರೆಗೆ ಪಟಾಕಿ ಸಿಡಿಸಬಹುದು ಎಂದು ಸರ್ಕಾರ ಬುಧವಾರ ತಿಳಿಸಿದೆ.
2018ರ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಜನರು ಹಬ್ಬದ ದಿನದಂದು(ಅಕ್ಟೋಬರ್ 31, 2024) ನಿಗದಿತ ಸಮಯದಲ್ಲಿ ಪಟಾಕಿಗಳನ್ನು ಸಿಡಿಸಬಹುದು ಮತ್ತು ಹಸಿರು ಪಟಾಕಿಗಳನ್ನು ಬಳಸಬೇಕು ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಆಸ್ಪತ್ರೆಗಳು ಸೇರಿದಂತೆ ‘ನಿಶ್ಶಬ್ದ ಪ್ರದೇಶಗಳಲ್ಲಿ’ ಪಟಾಕಿ ಸಿಡಿಸುವುದನ್ನು ತಪ್ಪಿಸಬೇಕು ಮತ್ತು ಸಾಮಾನ್ಯ 2 ಗಂಟೆಗಳ ನಿಯಮಕ್ಕೆ ಅಂಟಿಕೊಳ್ಳಿ ಎಂದು ರಾಜ್ಯ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಗುಡಿಸಲುಗಳು ಮತ್ತು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳಬಹುದಾದ ಇತರ ಸ್ಥಳಗಳ ಬಳಿ ಪಟಾಕಿಗಳನ್ನು ಸಿಡಿಸಬಾರದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
‘ದೀಪಾವಳಿಯನ್ನು ಶಬ್ದ ಮತ್ತು ಹೊಗೆ ಸೂಸುವ ಪಟಾಕಿಗಳನ್ನು ಸಿಡಿಸುವುದಕ್ಕಿಂತ ಪರಿಸರ ಸ್ನೇಹಿಯಾಗಿ ಬೆಳಕಿನ ಹಬ್ಬವಾಗಿ ಆಚರಿಸೋಣ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.