ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಭೇಟಿ ನೀಡಿದ್ದ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಆಡಿದ ಒಂದು ಮಾತಿಗೆ ಅಣ್ಣಾಮಲೈ ಕೆರಳಿ ಕೆಂಡವಾಗಿದ್ದಾರೆ. ಅಣ್ಣಾಮಲೈ ಹಾಗೂ ಡಿಕೆಶಿ ಮಧ್ಯೆ ಮಾತಿನ ಸಮರ ತಾರಕಕ್ಕೇರಿದೆ.
ಲೋಕಸಭಾ ಕ್ಷೇತ್ರ ಮರುವಿಂಗಡನೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗುತ್ತಿದೆ. ಈ ಅನ್ಯಾಯದ ನಡೆಗಳನ್ನು ಖಂಡಿಸಲು ಇಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್ ಸೇರಿದಂತೆ ಒಟ್ಟು 14 ರಾಜ್ಯಗಳ ನಾಯಕರು ಭಾಗವಹಿಸಿದ್ದರು.
ಈ ಸಭೆಯ ಮಧ್ಯೆ ಡಿ.ಕೆ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಎಂ ಸ್ಟಾಲಿನ್ ಕರೆದ ಸಭೆಗೆ ತಮಿಳುನಾಡಿನಲ್ಲಿ ಬಿಜೆಪಿ ನಾಯಕರು ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದಾರೆ ಅನ್ನೋ ಪ್ರಶ್ನೆಗೆ ಡಿಕೆಶಿ ಉತ್ತರಿಸಿದರು.
ಅಣ್ಣಾಮಲೈ ನಮ್ಮ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಪೂರ್ ಮ್ಯಾನ್ (ಬಡ ಮನುಷ್ಯ). ಅಣ್ಣಾಮಲೈಗೆ ನಮ್ಮ ಶಕ್ತಿ ಏನು ಅನ್ನೋದು ಗೊತ್ತು. ನನ್ನನ್ನು ಬಿಜೆಪಿ, ತಿಹಾರ್ ಜೈಲಿಗೆ ಕಳಿಸಿತ್ತು. ಆಗಲೇ ನಾನು ಹೆದರಿಲ್ಲ. ಈಗ ಕಪ್ಪು ಬಾವುಟಕ್ಕೆ ಹೆದರಲ್ಲ. ಬಿಜೆಪಿಯ ಕಪ್ಪು ಬಾವುಟವನ್ನು ನಾನು ಸ್ವಾಗತಿಸುತ್ತೇನೆ. ಬಿಜೆಪಿಯವರು ಅವರ ಕೆಲಸ ಮಾಡಲಿ. ನಾನು ಅವರಿಗೆ ಶುಭ ಹಾರೈಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಅಣ್ಣಾಮಲೈ ಸಖತ್ ಟಾಂಗ್
ಡಿ.ಕೆ ಶಿವಕುಮಾರ್ ಅವರು ಈ ಹೇಳಿಕೆ ನೀಡಿದ ತಕ್ಷಣವೇ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಸೋಷಿಯಲ್ ಮೀಡಿಯಾದಲ್ಲೇ ತಿರುಗೇಟು ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಹೌದು.. ನಾನು ಶ್ರದ್ದೆಯಿಂದ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕದ ಜನರ ಸೇವೆ ಮಾಡಿದ್ದೇನೆ. ಈ ಬಗ್ಗೆ ಉಲ್ಲೇಖಿಸಿದ್ದಕ್ಕೆ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಮುಖ್ಯವಾಗಿ ಈ ಬಡ ವ್ಯಕ್ತಿಗೆ ವಿಶ್ ಮಾಡಿದ್ದಕ್ಕೆ ಧನ್ಯವಾದಗಳು. ಕರ್ನಾಟಕದ ಮುಖ್ಯಮಂತ್ರಿಯಾಗುವ ನಿಮ್ಮ ಪರಿಶ್ರಮಕ್ಕೆ ನನ್ನ ಶುಭಾಶಯಗಳು. ಸಿದ್ದರಾಮಯ್ಯರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಸಿಎಂ ಆಗುವ ನಿಮ್ಮ ಪರಿಶ್ರಮಕ್ಕೆ ನನ್ನ ಶುಭಾಶಯಗಳು ಎಂದು ಸಖತ್ ಟಾಂಗ್ ಕೊಟ್ಟಿದ್ದಾರೆ.