ಹೊಸದಿಗಂತ ಡಿಜಿಟಲ್ ಡೆಸ್ಕ್:
2024ರ ಬಹು ನಿರೀಕ್ಷಿತ ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ಚಾಣಕ್ಯ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ.
ಬೆಂಗಳೂರು ವಲಯದ ಲೋಕಸಭಾ ಕ್ಷೇತ್ರದ ಬಗ್ಗೆಯೂ ಅಮಿತ್ ಶಾ ಜೊತೆ ಹೆಚ್ಡಿಕೆ ಚರ್ಚೆ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ವೈದ್ಯ ಸಿ.ಎನ್.ಮಂಜುನಾಥ್ ಸ್ಪರ್ದಿಸಲಿದ್ದಾರೆ. ಈ ಬಾರಿ ಚುನಾವಣಾ ಪ್ರಚಾರಕ್ಕೆ ಬರುವಂತೆ ಅಮಿತ್ ಶಾಗೆ ಹೆಚ್ ಡಿಕೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ ಮಂಜುನಾಥ್ ಅವರನ್ನು ಗೆಲ್ಲಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ. ಆದರೆ ಈ ಬಾರಿ ಡಿಕೆ ಸುರೇಶ್ ಅವರನ್ನು ಹೇಗಾದರೂ ಸೋಲಿಸಲೇ ಬೇಕು ಎಂದು ದಳಪತಿ ನಿರ್ಧರಿಸಿದ್ದಾರೆ.
ಬಿಜೆಪಿ ಈಗಾಗಲೇ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಸದ್ಯಕ್ಕೆ ಅಮಿತ್ ಶಾ ಜೆಡಿಎಸ್ ನಾಲ್ಕು ಕ್ಷೇತ್ರಗಳಿಗೆ ಆಫರ್ ನೀಡುತ್ತಿರುವುದು ಗೊತ್ತೇ ಇದೆ. ಮುಂದಿನ 48 ಗಂಟೆಯೊಳಗೆ ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.