ಹೊಸದಿಗಂತ ಮಡಿಕೇರಿ:
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಶುಕ್ರವಾರ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಹಾಗೂ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಅಲ್ಲದೆ ಬೆಂಗಳೂರಿನ ಸ್ಯಾಂಕಿ ಕರೆಯಲ್ಲಿ ನಡೆಯುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ತಲಕಾವೇರಿಯಿಂದ ಕಾವೇರಿಯ ಪವಿತ್ರ ತೀರ್ಥವನ್ನು ಕೊಂಡೊಯ್ದರು.
ಬೆಂಗಳೂರಿಂದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರೊಂದಿಗೆ ಶುಕ್ರವಾರ ಬೆಳಗ್ಗೆ ಭಾಗಮಂಡಲದ ಹೆಲಿಪ್ಯಾಡ್’ಗೆ ಬಂದಿಳಿದರು.
ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಎಂ.ಎಲ್.ಸಿ.ಗಳಾದ ಸಿ.ಎಸ್.ಅರುಣ್ ಮಾಚಯ್ಯ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿ.ಪಂ.ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಉಪಮುಖ್ಯಮಂತ್ರಿಯವರನ್ನು ಸ್ವಾಗತಿಸಿದರು.
ಬಳಿಕ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಡಿಕೆಶಿ ಭೇಟಿ ನೀಡಿದ ಅವರನ್ನು ನಾದ ಸ್ವರದೊಂದಿಗೆ ಬರಮಾಡಿಕೊಳ್ಳಲಾಯಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ನಂತರ ತಲಕಾವೇರಿಗೆ ತೆರಳಿದರು. ಅಲ್ಲಿಯೂ ಬ್ರಹ್ಮಕುಂಡಿಕೆ ಮುಂಭಾಗದ ಕಲ್ಯಾಣಿಯಲ್ಲಿ ಪವಿತ್ರಸ್ನಾನ ಮಾಡಿದ ಅವರು ವಿಶೇಷ ಪೂಜೆ ಸಲ್ಲಿಸಿದರಲ್ಲದೆ, ವಿಶ್ವ ಜಲ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಕಾವೇರಿ ಆರತಿ ಕಾರ್ಯಕ್ರಮಕ್ಕೆ ತಲಕಾವೇರಿಯ ಬ್ರಹ್ಮ ಕುಂಡಿಕೆಯಿಂದ ತೀರ್ಥವನ್ನು ಸಂಗ್ರಹಿಸಿದರು.
ಭಾಗಮಂಡಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ವಿಶ್ವ ಜಲದಿನವಾಗಿದ್ದು, ಕಾವೇರಿ ನಮ್ಮ ರಾಜ್ಯಕ್ಕೆ ಮತ್ತು ತಮಿಳುನಾಡಿಗೆ ಆಶ್ರಯ ನೀಡಿದೆ. ಹಾಗಾಗಿ ಕಾವೇರಿಗೆ ನಮನ ಸಲ್ಲಿಸಿ ಪೂಜೆ ಮಾಡಿದ್ದೇನೆ. ನಾಳೆಯಿಂದ ಒಂದು ವಾರಗಳ ಕಾಲ ಸೇವ್ ವಾಟರ್ ಪ್ರಚಾರ ನಡೆಯಲಿದ್ದು, ಪ್ರತಿಯೊಬ್ಬರೂ ‘ನಾನು ನೀರನ್ನು ಉಳಿಸುತ್ತೇನೆ’ಎಂದು ಪ್ರತಿಜ್ಞೆ ಮಾಡುವಂತೆ ಕರೆ ನೀಡಿದರು.
ಜಲದಿನ ಅಂಗವಾಗಿ ಶನಿವಾರ ಬೆಳಗ್ಗೆ ತಮಿಳುನಾಡಿಗೆ ತಾನು ಭೇಟಿ ನೀಡಲಿದ್ದು, ಸ್ಟಾಲಿನ್ ಕರೆದಿರೋ ಸಭೆಯಲ್ಲಿ ಭಾಗವಹಿಸುವುದರೊಂದಿಗೆ ರಾಜ್ಯದ ಹಿತ ಕಾಪಾಡಲು ಪ್ರಸ್ತಾವನೆ ಸಲ್ಲಿಸಲಿರುವುದಾಗಿ ನುಡಿದರು.
ಶನಿವಾರದ ಕರ್ನಾಟಕ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್ ಅವರು, ರಾಜ್ಯದ ಹಿತವನ್ನು ನಾವು ರಕ್ಷಣೆ ಮಾಡುತ್ತೇವೆ. ಇದಕ್ಕಾಗಿ ಬಂದ್ ಮಾಡುವ ಅವಶ್ಯಕತೆ ಇಲ್ಲ. ಯಾವ ಬಂದ್, ಗಲಾಟೆ ಮಾಡದೆ ಎಲ್ಲರೂ ಶಾಂತ ರೀತಿಯಲ್ಲಿ ಇರಬೇಕೆಂದು ಮನವಿ ಮಾಡುವುದಾಗಿ ಹೇಳಿದರು.