January22, 2026
Thursday, January 22, 2026
spot_img

HDK ಮಾತಿಗೆ ಡಿಕೆಶಿ ಗರಂ: ದೇವೇಗೌಡರ ಸಿಎಂ ಪಟ್ಟದ ಇತಿಹಾಸ ಕೆದಕಿದ ಡಿಸಿಎಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಒಕ್ಕಲಿಗ ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಇದೀಗ ಡಿಕೆ ಶಿವಕುಮಾರ್ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಸ್ವಾಮೀಜಿಗಳ ರಾಜಕೀಯ ಪಾತ್ರದ ಬಗ್ಗೆ ಹೆಚ್‌ಡಿಕೆ ಆಕ್ಷೇಪಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

“ಪಾಪ, ಕುಮಾರಣ್ಣನಿಗೆ ‘ಎರಡನೇ ಮಠ’ದ ವಿಚಾರವು ಈಗ ಯಾಕೆ ಕಷ್ಟವಾಯಿತು?” ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ಅಲ್ಲದೆ, “ಸ್ವಾಮೀಜಿಗಳು ಇಲ್ಲದೇ ಹೋಗಿದ್ದರೆ ದೇವೇಗೌಡ್ರು ಸಿಎಂ ಆಗ್ತಿದ್ರಾ? ಅವತ್ತು ಸ್ವಾಮೀಜಿ ರಸ್ತೆಗೆ ಇಳಿದಿರಲಿಲ್ವಾ?” ಎಂದು ಕೇಳುವ ಮೂಲಕ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ರಾಜಕೀಯ ಏಳಿಗೆಯಲ್ಲಿ ಮಠಗಳ ಪಾತ್ರವನ್ನು ನೆನಪಿಸಿದರು.

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಗೆ ತೊಂದರೆಯಾದಾಗ ಸ್ವಾಮೀಜಿಗಳು ಮೌನವಾಗಿದ್ದರೇ? ಎಂದು ಪ್ರಶ್ನಿಸಿ, “ಕೆಲವು ಸಂದರ್ಭಗಳಲ್ಲಿ‌ ಸ್ವಾಮೀಜಿಗಳು ಮಾತನಾಡಿದ್ದಾರೆ” ಎಂದು ಹೇಳುವ ಮೂಲಕ ರಾಜಕೀಯದಲ್ಲಿ ಧಾರ್ಮಿಕ ಮುಖಂಡರ ಹಸ್ತಕ್ಷೇಪವು ಹೊಸತೇನಲ್ಲ ಎಂಬರ್ಥದಲ್ಲಿ ಡಿಕೆ ಶಿವಕುಮಾರ್ ಅವರು ಹೆಚ್‌ಡಿಕೆ ಆಕ್ಷೇಪಣೆಯನ್ನು ತಳ್ಳಿಹಾಕಿದ್ದಾರೆ. ಈ ಮೂಲಕ ಒಕ್ಕಲಿಗ ಮಠಗಳ ಬೆಂಬಲವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಲು ಡಿಕೆ ಶಿವಕುಮಾರ್ ಸಿದ್ಧರಿರುವುದನ್ನು ಸ್ಪಷ್ಟಪಡಿಸಿದ್ದಾರೆ.

Must Read