Friday, November 21, 2025

ಡಿಕೆಶಿ ‘ತ್ಯಾಗ’ದ ಮಾತು ಹತಾಶೆಯ ಪ್ರತೀಕ, ಸಿಎಂ ಕನಸು ಭಗ್ನ: ಯತ್ನಾಳ್ ಲೇವಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ತ್ಯಾಗದ’ ಕುರಿತು ಆಡುತ್ತಿರುವ ಮಾತುಗಳು ಅವರಲ್ಲಿನ ಹತಾಶೆಯ ಮನಸ್ಥಿತಿಯನ್ನು ಬಿಂಬಿಸುತ್ತವೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀಕ್ಷ್ಣವಾಗಿ ಲೇವಡಿ ಮಾಡಿದ್ದಾರೆ.

ಡಿಕೆ ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಡಿಕೆಶಿ ಅವರು ಸಿಎಂ ಸ್ಥಾನದ ಕುರಿತು ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅಲ್ಲದೆ, ಬಿಹಾರ ವಿಧಾನಸಭಾ ಚುನಾವಣೆಗಾಗಿ ಭಾರಿ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದರು ಮತ್ತು ಅಲ್ಲಿನ ದೊಡ್ಡ ನಾಯಕರನ್ನು ಪ್ರಚಾರಕ್ಕೆ ಬಳಸಿದ್ದರೂ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಈ ಸೋಲಿನಿಂದಾಗಿ ಡಿಕೆ ಶಿವಕುಮಾರ್ ಸಂಪೂರ್ಣವಾಗಿ ಭ್ರಮನಿರಸನಾಗಿದ್ದಾರೆ ಎಂದು ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ.

ಸಿದ್ದು ಮುಂದೆ ಹೈಕಮಾಂಡ್ ಸರೆಂಡರ್:

“ಬಿಹಾರ ಚುನಾವಣೆ ಬಳಿಕ ಹೈಕಮಾಂಡ್ ಸಿದ್ದರಾಮಯ್ಯ ಅವರ ಮುಂದೆ ಸರೆಂಡರ್ ಆಗಿದೆ. ಈಗ ಏನಾದರೂ ಗೊಂದಲ ಸೃಷ್ಟಿಸಿದರೆ ಕರ್ನಾಟಕವನ್ನೂ ಕಳೆದುಕೊಳ್ಳುವ ಆತಂಕ ಹೈಕಮಾಂಡ್‌ಗೆ ಇದೆ. ಈ ಕಾರಣಕ್ಕಾಗಿಯೇ ಹೈಕಮಾಂಡ್ ಮೌನಕ್ಕೆ ಶರಣಾಗಿದೆ,” ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿಶ್ಲೇಷಿಸಿದರು.

ಡಿಕೆಶಿ ಜೊತೆ ಶಾಸಕರಿಲ್ಲ, ಸಿಎಂ ಕನಸು ಗಾಯಬ್:

ಇದೇ ವೇಳೆ, ಡಿಕೆ ಶಿವಕುಮಾರ್ ಅವರ ಬಳಿ ಶಾಸಕರ ಕೊರತೆ ಎದುರಾಗಿದೆ, ಅವರ ಜೊತೆಯಿದ್ದ ಶಾಸಕರು ‘ಗಾಯಬ್’ ಆಗಿದ್ದಾರೆ ಎಂದು ಯತ್ನಾಳ್ ಬಾಂಬ್ ಸಿಡಿಸಿದರು.

“ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವಾಗ, ‘ಇನ್ನೊಂದೂವರೆ-ಎರಡು ವರ್ಷದಲ್ಲಿ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುತ್ತಾರೆ, ಆಗ ಡಿಕೆಶಿ ಕಡೆ 60 ಶಾಸಕರು ಇರುತ್ತಾರೆ, ಡಿಕೆಶಿ ಸಿಎಂ ಆಗುತ್ತಾರೆ, ವಿಜಯೇಂದ್ರ ಡಿಸಿಎಂ ಆಗುತ್ತಾರೆ’ ಎಂಬ ಚರ್ಚೆಯಿತ್ತು. ಡಿಕೆಶಿ ಮತ್ತು ವಿಜಯೇಂದ್ರ ನೇತೃತ್ವದಲ್ಲಿ ಸರ್ಕಾರ ರಚನೆಯಾಗುತ್ತದೆ, ಅದಕ್ಕೆ ನಾನು ತೊಡಕಾಗುತ್ತೇನೆ ಎಂದು ಭಾವಿಸಿ ನನ್ನನ್ನು ಉಚ್ಚಾಟನೆ ಮಾಡಲಾಗಿತ್ತು. ಈ ಮಾತನ್ನು ರಾಷ್ಟ್ರೀಯ ನಾಯಕರೇ ನನಗೆ ಹೇಳಿದ್ದರು,” ಎಂದು ಯತ್ನಾಳ್ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದರು.

“ಆದರೆ ಪುಣ್ಯಕ್ಕೆ, ಡಿಕೆಶಿ ಅವರ ಜೊತೆ ಈಗ ಶಾಸಕರಿಲ್ಲ. ಉಪಮುಖ್ಯಮಂತ್ರಿ ಆಗುವ ಆಸೆಯಲ್ಲಿದ್ದ ಬಿ.ವೈ. ವಿಜಯೇಂದ್ರ ಕೂಡಾ ಹತಾಶರಾಗಿದ್ದಾರೆ. ಒಂದು ವೇಳೆ ಡಿಕೆಶಿ-ವಿಜಯೇಂದ್ರ ಸೇರಿ ಸರ್ಕಾರ ಮಾಡಿದ್ದರೆ ಕರ್ನಾಟಕದಲ್ಲಿ ಗಿಡ, ಮರ, ಬಂಗಾರ, ಬೆಳ್ಳಿ ಏನೂ ಉಳಿಯುತ್ತಿರಲಿಲ್ಲ, ಇಬ್ಬರೂ ಸೇರಿ ಎಲ್ಲವನ್ನೂ ಸ್ವಚ್ಛ ಮಾಡುತ್ತಿದ್ದರು,” ಎಂದು ಯತ್ನಾಳ್ ವ್ಯಂಗ್ಯವಾಡಿದರು.

ಕೊನೆಯದಾಗಿ, ಡಿಕೆ ಶಿವಕುಮಾರ್ ಅವರು ಬೊಕ್ಕೆ ಹಿಡಿದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಮನೆ ಮುಂದೆ “ಇಷ್ಟು ಸಾಧನೆ ಮಾಡಿದ್ದೇನೆ” ಎಂದು ಹೇಳುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿಯವರೇ “ನಾನೇ ಝೀರೋ ಆಗಿದ್ದೇನೆ, ಏನು ಮಾಡಲಿ?” ಎಂದು ಹೇಳುವ ಪರಿಸ್ಥಿತಿ ಇದೆ. ಇದೇ ಈಗಿನ ಕರ್ನಾಟಕದ ರಾಜಕೀಯ ಪರಿಸ್ಥಿತಿ ಎಂದು ಯತ್ನಾಳ್ ಕಿಡಿಕಾರಿದರು.

error: Content is protected !!