ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳ ಸಾವಿಗೆ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ಕಾರಣ ಎಂಬ ಅನುಮಾನ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮಾರಾಟವನ್ನು ನಿಷೇಧಿಸಿದೆ.
ಚೆನ್ನೈ ಮೂಲದ ಕಂಪನಿಯೊಂದು ತಯಾರಿಸುವ ಕೆಮ್ಮಿನ ಸಿರಪ್ ಮಾರಾಟವನ್ನು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ತಮಿಳುನಾಡಿನಾದ್ಯಂತ ನಿಷೇಧಿಸಲಾಗಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೆನ್ನೈ ಮೂಲದ ಕಂಪನಿಯು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪುದುಚೇರಿಗೆ ಕೋಲ್ಡ್ರೀಫ್ ಸಿರಪ್ ಪೂರೈಸುತ್ತದೆ. ಇದರಲ್ಲಿ ಡೈಥೀಲೀನ್ ಗ್ಲೈಕಾಲ್ ಎಂಬ ರಾಸಾಯನಿಕ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿ ಸಾವಿಗೆ ಕಾರಣವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಹಾಗಾಗಿ, ಕಾಂಚೀಪುರಂ ಜಿಲ್ಲೆಯ ಸುಂಗುವರ್ಚತ್ರಂನಲ್ಲಿರುವ ಔಷಧ ಕಂಪನಿಯ ಉತ್ಪಾದನಾ ಘಟಕದಲ್ಲಿ ತಪಾಸಣೆ ನಡೆಸಿ, ಮಾದರಿಗಳನ್ನು ಸಂಗ್ರಹಿಸಲಾಗಿದೆ. DEG (ಡೈಥಿಲೀನ್ ಗ್ಲೈಕಾಲ್) ರಾಸಾಯನಿಕದ ಇದೆಯೇ ಇಲ್ಲವೇ? ಎಂದು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದಿಂದ ಪತ್ರ
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮಕ್ಕಳ ಸಾವುಗಳಾಗಿವೆ ಎಂಬ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶುಕ್ರವಾರ ಸೂಚನೆ ರವಾನಿಸಿದೆ. 2 ವರ್ಷದೊಳಗಿನ ಯಾವುದೇ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದಂತೆ ಔಷಧಗಳನ್ನು ಶಿಫಾರಸು ಮಾಡಬಾರದು ಎಂದು ನಿರ್ದೇಶಿಸಿದೆ.