August 19, 2026
Wednesday, August 19, 2026
spot_img

ಶಾಂತಿ ಬೇಡ, ರಕ್ತಪಾತವೇ ಬೇಕೇ? ಪಾಕ್ ಸರ್ಕಾರದ ವಿರುದ್ಧ ತಿರುಗಿಬಿದ್ದ PoK ಜನತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆ ತೀವ್ರಗೊಂಡಿದ್ದು, ಸ್ಥಳೀಯರ ಪ್ರತಿಭಟನೆ ಈಗ ಉಗ್ರ ಸ್ವರೂಪ ಪಡೆದುಕೊಂಡಿದೆ. ಜಮ್ಮು ಕಾಶ್ಮೀರ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ತನ್ನ 38 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಪಾಕಿಸ್ತಾನ ಸರ್ಕಾರಕ್ಕೆ 48 ಗಂಟೆಗಳ ಅಂತಿಮ ಗಡುವು ನೀಡಿದೆ. ಮುಂಬರುವ ಜುಲೈ 27ರ ಪ್ರಾದೇಶಿಕ ಚುನಾವಣೆಯ ನಡುವೆಯೇ ಈ ಸಂಘರ್ಷ ತಾರಕಕ್ಕೇರಿದೆ.

ಮುರಿದುಬಿದ್ದ ಸಂಧಾನ ಸೂತ್ರ

ಬೆಲೆ ಏರಿಕೆ, ಸಬ್ಸಿಡಿ ಕಡಿತ ಹಾಗೂ ದುಬಾರಿ ವಿದ್ಯುತ್ ಬಿಲ್ ವಿರುದ್ಧ ಜೂನ್ 9ರಿಂದಲೇ ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿತ್ತು. ಬಿಕ್ಕಟ್ಟು ಶಮನಗೊಳಿಸಲು ಪಾಕ್ ಆಡಳಿತ ನಡೆಸಿದ ಸರಣಿ ಸಂಧಾನ ಮಾತುಕತೆಗಳು ಸಂಪೂರ್ಣ ವಿಫಲವಾಗಿವೆ. ಸರ್ಕಾರದ ಧೋರಣೆಯಿಂದ ಆಕ್ರೋಶಗೊಂಡಿರುವ ಪ್ರತಿಭಟನಾಕಾರರು ಮುಜಾಫರಾಬಾದ್‌ಗೆ ಮಹಾ ರ‍್ಯಾಲಿ ಹಮ್ಮಿಕೊಂಡಿದ್ದಾರೆ.

ಪಾಕ್ ಸರ್ಕಾರದ ವಿರುದ್ಧ ಗಂಭೀರ ಆರೋಪ

“ನಮಗೆ ಶಾಂತಿಯುತವಾಗಿ ಹಕ್ಕುಗಳನ್ನು ಪಡೆಯಬೇಕಿದೆ, ಆದರೆ ಇಸ್ಲಾಮಾಬಾದ್ ಸರ್ಕಾರಕ್ಕೆ ರಕ್ತಪಾತವೇ ಬೇಕಾಗಿದೆ” ಎಂದು ಪ್ರತಿಭಟನಾ ನಾಯಕರು ಗಂಭೀರವಾಗಿ ದೂಷಿಸಿದ್ದಾರೆ. ಸಾರ್ವಜನಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಬದಲು, ಸೇನಾ ಬಲಪ್ರಯೋಗದ ಮೂಲಕ ಹೋರಾಟವನ್ನು ಹತ್ತಿಕ್ಕಲು ಪಾಕಿಸ್ತಾನ ಕುತಂತ್ರ ನಡೆಸುತ್ತಿದೆ ಎಂದು ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಪ್ರಾಂತ್ಯದಾದ್ಯಂತ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !