ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆ ನಡೆಯುತ್ತಿದ್ದು, ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ನಡುವೆ ಜಟಾಪಟಿ ನಡೆಯಿತು.
ಆರಂಭದಲ್ಲಿ ಮಸೂದೆ ಕುರಿತಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಚರ್ಚೆ ಶುರು ಮಾಡಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮಾತನಾಡಿದರು. ಆ ಬಳಿಕ
ಸೋನಿಯಾ ಗಾಂಧಿ ಅವರ ಭಾಷಣ ಮುಕ್ತಾಯಗೊಂಡ ಕೂಡಲೇ ಬಿಜೆಪಿಯ ನಿಶಿಕಾಂತ್ ದುಬೆ ಅವರು ಸರ್ಕಾರದ ಪರವಾಗಿ ಮಾತನಾಡಲು ಎದ್ದು ನಿಂತರು. ಆಗ ಕೂಡಲೇ ಮಧ್ಯ ಪ್ರವೇಶ ಮಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಬಿಜೆಪಿ ಪರವಾಗಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡಲು ಯಾವುದೇ ಬಿಜೆಪಿ ಸಂಸದೆ ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಈ ವೇಳೆ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಿಳೆಯರಿಗೆ ಅನುಕೂಲವಾಗುವ ಮಸೂದೆ ಬಗ್ಗೆ ಮಾತನಾಡಲು ಮಹಿಳಾ ಸಂಸದರೇ ಬೇಕೇ? ಎಂದು ಅಧೀರ್ ರಂಜನ್ ಚೌಧರಿ ಅವರಿಗೆ ಪ್ರಶ್ನಿಸಿದರು.
‘ಮಹಿಳೆಯರ ಪರವಾಗಿ ಮಾತನಾಡಲು ಮಹಿಳಾ ಸಂಸದರೇ ಏಕೆ ಬೇಕು? ಪುರುಷರು ಏಕೆ ಮಾತನಾಡಬಾರದು? ಯಾವ ರೀತಿಯ ಸಮಾಜವನ್ನು ನೀವು ಕಲ್ಪಿಸಿಕೊಂಡಿದ್ದೀರಿ? ಭಾರತೀಯ ಸಂಸ್ಕೃತಿಯಲ್ಲಿ ಸಹೋದರರು ಮೊದಲು ಮಹಿಳೆಯರ ಪರ ದನಿ ಎತ್ತುತ್ತಾರೆ’ ಎಂದು ತಿರುಗೇಟು ನೀಡಿದರು.