ಯೆಸ್ ನೀವು ಐಸ್‌ಕ್ರೀಂ ಪ್ರಿಯರಾದರೆ ತಪ್ಪದೇ ಈ ಸ್ಟೋರಿಯನ್ನೊಮ್ಮೆ ಓದಲೇ ಬೇಕು. ಐಸ್ ಕ್ರೀಂ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದಿಯಾಗಿ ದೊಡ್ಡವರು ಸಹ ಐಸ್ ಕ್ರೀಂ ಇಷ್ಟ ಪಟ್ಟೇ ಪಡುತ್ತಾರೆ.
ಅನೇಕರಿಗೆ ಬೆಳಗ್ಗೆ ಎದ್ದ ಕೂಡಲೇ ಐಸ್ ಕ್ರೀಂ ತಿನ್ನುವ ಚಟವಿರುತ್ತದೆ. ರಾತ್ರಿ ಊಟದ ನಂತರ ಐಸ್ ಕ್ರೀಂ ಬೇಕೇ ಎನ್ನುವ ಮಂದಿ ಇನ್ನೊಂದಷ್ಟು. ಈ ರೀತಿಯ ಹವ್ಯಾಸಗಳೇನಾದರೂ ನಿಮಗೆ ಇದ್ದರೆ ತಕ್ಷಣಕ್ಕೆ ಬಿಟ್ಟು ಬಿಡಿ. ಇಲ್ಲವಾದಲ್ಲಿ ನಿಮ್ಮ ಆರೋಗ್ಯ ಸಂಪೂರ್ಣ ಹದಗೆಡುವುದರಲ್ಲಿ ಸಂದೇಹವೇ ಇಲ್ಲ. ಐಸ್ ಕ್ರೀಂ ತಿನ್ನುವುದರಿಂದ ದೇಹದ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ ನೋಡೋಣ.
ಐಸ್ ಕ್ರೀಂ ನಲ್ಲಿ ಇರುವ ಸಕ್ಕರೆ ಪ್ರಮಾಣವು ವ್ಯಕ್ತಿಯ ದೇಹದ ಮೇಲೆ ಪರಿಣಾಮ ಬೀರಿ ನಿದ್ರಾಹೀನತೆಯನ್ನು ತಂದೊಡ್ಡುತ್ತದೆ. ರಾತ್ರಿ ಐಸ್ ಕ್ರೀಂ ತಿನ್ನುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಐಸ್ ಕ್ರೀಂ ತಿಂದು ಹಲ್ಲುಜ್ಜಲೇ ಬೇಕು. ಇಲ್ಲವಾದಲ್ಲಿ ಬಾಯಲ್ಲಿ ಸಕ್ಕರೆಯ ಅಂಶ ಉಳಿದು ಕಲ್ಲು ಹುಳುಕಾಗಲು ಪ್ರಮುಖ ಕಾರಣವಾಗುತ್ತದೆ.
ಶೀತ ದೇಹ ಪ್ರಕೃತಿಯವರಿಗಾದರೆ ಕಫ, ಕೆಮ್ಮು ಮೊದಲಾದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೊಟ್ಟೆಯುಬ್ಬರಿಸುವ ಸಾಧ್ಯತೆಯೂ ಇವೆ. ಬೊಜ್ಜಿಗೆ ಹೇಳಿ ಮಾಡಿದ ವಿಚಾರವೆಂದರೆ ಅದು ಐಸ್ ಕ್ರೀಂ. ಅತ್ಯಂತ ಹೆಚ್ಚಿನ ಕ್ಯಾಲೋರಿ ಹೊಂದಿರುವ ಐಸ್ ಕ್ರೀಂಗಳು ತೂಕ ಹಾಗೂ ಬೊಜ್ಜು ಹೆಚ್ಚಾಗಲು ಪ್ರಮುಖ ಕಾರಣವಾಗುತ್ತದೆ. ಹೀಗೆ ಅನೇಕ ತೊಂದರೆಗಳನ್ನು ರಾತ್ರಿ ಹೊತ್ತು ಐಸ್ ಕ್ರೀಂ ಸೇವಿಸುವುದರಿಂದ ಆಹ್ವಾನಿಸಿದಂತಾಗುತ್ತದೆ.