ಮಕ್ಕಳು ಏನು ತಿನ್ನಬೇಕು, ಎಷ್ಟು ತಿನ್ನಬೇಕು, ಎಷ್ಟು ಸಮಯದೊಳಗೆ ತಿನ್ನಬೇಕು ಇದನ್ನೆಲ್ಲಾ ನಾವೇ ನಿರ್ಧರಿಸಿಬಿಡುತ್ತೇವೆ. ಅವರಿಗೆ ಏನು ಗೊತ್ತಾಗತ್ತೆ? ಈಗ ತಿನ್ನಿಸಿಲ್ಲ ಎಂದರೆ ಮುಂದೆ ಅನಾರೋಗ್ಯ ಕಾಡುತ್ತದೆ ಎಂದು ಚೆನ್ನಾಗಿ ತಿನ್ನಿಸಲು ಮುಂದೆ ಹೋಗುತ್ತೇವೆ.
ಮಗು ಇಷ್ಟೇ ತಿನ್ನಬೇಕು ಎಂದು ನಿರ್ಧರಿಸೋಕೆ ನಾವ್ಯಾರೂ ಅಲ್ಲ, ನಮಗೇ ಯಾರಾದರೂ ನೀನು ಐದು ರೊಟ್ಟಿ ತಿನ್ನಲೇಬೇಕು ಎಂದು ಹೇಳಿದರೆ ಏನು ಮಾಡ್ತೀವಿ? ನಮಗೆ ಎಷ್ಟು ಹಿಡಿಸುತ್ತದೋ ಅಷ್ಟು ಮಾತ್ರ ತಿನ್ನೋದು ಎಂದು ಹೇಳೋದಿಲ್ವಾ? ಮಕ್ಕಳೂ ಹಾಗೇ ಅವರಿಗೆಷ್ಟು ಇಷ್ಟವೋ ಅಷ್ಟು ತಿನ್ನುತ್ತಾರೆ. ನೆನಪಿನಲ್ಲಿಡಿ. ನೀವು ಹಿಂಸೆ ಮಾಡಿಸಿ ತಿನ್ನಿಸಿದಷ್ಟು ಮಕ್ಕಳಿಗೆ ಊಟದ ಬಗ್ಗೆ ಆಸಕ್ತಿ ಹೋಗುತ್ತದೆ.
ದಿನವೂ ಒಂದೇ ಊಟ ಕೊಟ್ಟರೆ ಹೇಗೆ? ನೀವು ತಿಂತೀರಾ ದಿನವೂ ಒಂದೇ ಊಟ? ಅದೇ ಅನ್ನ ಸಾರು? ಅವರಿಗೂ ಹಾಗೆ ವೆರೈಟಿ ಬೇಕು. ರುಚಿ ಬೇಕು. ಇಷ್ಟಪಟ್ಟು ತಿನ್ನುವುದನ್ನು ನೀಡಿ. ಇಷ್ಟ ಇಲ್ಲ ಎಂದದನ್ನು ಬಿಟ್ಟುಬಿಡಿ, ಕೆಲ ದಿನಗಳ ನಂತರ ಮತ್ತೆ ನೀಡಿ.
ನಿಮ್ಮ ಜೊತೆ ಅವರಿಗೂ ಊಟ ಮಾಡಲು ಅವಕಾಶ ನೀಡಿ. ಅವರೆಷ್ಟು ತಿನ್ನುತ್ತಾರೋ ತಿನ್ನಲಿ, ಆಮೇಲೆ ನೀವೇ ತಿನ್ನಿಸಿ. ನಿಮ್ಮ ಜೊತೆ ಊಟಕ್ಕೆ ಕುಳಿತಾಗ ಎಲ್ಲರೂ ತಿನ್ನುವುದನ್ನು ನೋಡಿ ಅವರೂ ತಿನ್ನುತ್ತಾರೆ. ಅದನ್ನು ಬಿಟ್ಟು ಟಿವಿ ಅಥವಾ ಮೊಬೈಲ್ ಕೊಟ್ಟು ತಿನಿಸುವುದು, ಹೊರಗೆ ಕರೆದುಕೊಂಡು ಹೋಗಿ ಕಾಗೆ, ನಾಯಿ ತೋರಿಸಿ ತಿನ್ನಿಸಬೇಡಿ.
ಈ ರೀತಿ ಡಿಸ್ಟ್ರಾಕ್ಷನ್ಸ್ ಜೊತೆ ತಿನ್ನಿಸಿದಾಗ ಮಕ್ಕಳಿಗೆ ನಾವೇನು ತಿನ್ನುತ್ತಿದ್ದೀವಿ ಎನ್ನುವ ಅರಿವೇ ಇರೋದಿಲ್ಲ. ಉದಾಹರಣೆಗೆ ಆಲೂಗಡ್ಡೆ ಹಸಿಯಾಗಿ ಹೇಗಿರುತ್ತದೆ, ಬೇಯಿಸಿದ ಮೇಲೆ ಹೇಗಾಗುತ್ತದೆ, ಕತ್ತರಿಸಿದರೆ ಹೇಗೆ ಕಾಣುತ್ತದೆ, ಕತ್ತರಿಸಿದ ಪೀಸ್‌ಗಳನ್ನು ಸ್ಮಾಶ್ ಮಾಡಿದಾಗ ಹೇಗೆ ಕಾಣುತ್ತದೆ. ಅದರ ರುಚಿ ಹೇಗಿದೆ ಇವೆಲ್ಲವೂ ಮಕ್ಕಳು ತಿಳಿಯಲು ಆಗುವುದಿಲ್ಲ.
ಮೊದಲಿಗೆ ಫೋರ್ಸ್ ಫೀಡಿಂಗ್ ಎಂದರೆ ಏನು ತಿಳಿಯೋಣ..
- ಮಕ್ಕಳಿಗೆ ಎಷ್ಟು ಆಹಾರ, ಯಾವ ಆಹಾರ ಬೇಕು ಎಂದು ನೀವೇ ನಿರ್ಧರಿಸುವುದು
- ಮಕ್ಕಳು ಕಿರಿಕಿರಿ ಮಾಡಿದಾಗ ಜೋರು ಮಾಡುವುದು, ಹೊಡೆಯುವುದು
- ಊಟ ತಿಂದರೆ ಐಸ್ ಕ್ರೀಂ ಕೊಡಿಸ್ತೇನೆ ಎನ್ನುವ ಪ್ರೀತಿಯ ಲಂಚದ ಮಾತುಗಳು
- ತಿನ್ನದ ಮಕ್ಕಳಿಗೆ ಶಿಕ್ಷೆ ನೀಡುವುದು
- ಬೇರೆ ಮಕ್ಕಳ ಜೊತೆ ಹೋಲಿಸಿ ಹೀಯಾಳಿಸುವುದು
- ಬಾಯಿಗೆ ಊಟ ತುರುಕಿ ನುಂಗಿಸುವುದು
- ಮಕ್ಕಳು ಬೇಡ ಎಂದು ಹೇಳುವುದನ್ನು ಕಿವಿಗೆ ಹಾಕದೇ ಇರುವುದು
ಪರಿಣಾಮ ಏನು?
- ಎಲ್ಲರಿಗೂ ತಮ್ಮ ಹೊಟ್ಟೆ ಬಗ್ಗೆ ಗೊತ್ತಿದೆ. ನೀವು ಎಷ್ಟು ಚಪಾತಿ ತಿಂತೀರಿ ಎಂದು ಯಾರಾದರೂ ಕೇಳಿದರೆ ಏನು ಹೇಳ್ತೀರಿ? ಎರಡು,ಮೂರು ಹೀಗೆ ಹೇಳಬಹುದು. ಮಕ್ಕಳು ಹೇಗೆ ಹೇಳಬೇಕು, ಅವರೆಷ್ಟು ತಿಂದರು ಅವರಿಗೇನು ಗೊತ್ತು.
- ಊಟ ಎಂದರೆ ವಾಂತಿ ಬರುವಂತೆ ಆಗಿಬಿಡುತ್ತದೆ. ಹಿಂದೆಲ್ಲಾ ಮಕ್ಕಳು ಓದುವ ಸಮಯ ಬಂದಾಗ ಹೇಗೆ ಭಯಬೀಳುತ್ತಿದ್ದರೋ ಹಾಗೆ ಊಟಕ್ಕೆ ಹೆದರುತ್ತಾರೆ. ಇದು ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ.
- ಮಕ್ಕಳಿಗೆ ಊಟದ ಸಮಯ ಒತ್ತಡ ನೀಡುತ್ತದೆ. ಮಕ್ಕಳು ಎಂಜಾಯ್ ಮಾಡಿದರೆ ಮಾತ್ರ ಮತ್ತೆ ಮತ್ತೆ ತಿನ್ನುತ್ತಾರೆ. ಊಟ ಮಾಡುವ ನೆಮ್ಮದಿಯಾದ ಅನುಭವವನ್ನು ಕಿತ್ತುಕೊಳ್ಳಬೇಡಿ.
- ಹೊರಗಿನ ಆಹಾರ, ಜಂಕ್ ಹಾಗೂ ಸಿಹಿ ತಿಂಡಿಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಹೇಳಬೇಕಿಲ್ಲ.
- ದೊಡ್ಡವರಾದ ನಂತರವೂ ಊಟ ತಿಂಡಿಗೆ ಕಿರಿಕಿರಿ ಮಾಡುತ್ತಾರೆ. ಇಂಥ ಅಡುಗೆ ಮಾಡಿದರೆ ತಿನ್ನುತ್ತೇನೆ ಇಲ್ಲವೇ ಇಲ್ಲ ಎನ್ನುತ್ತಾರೆ. ಮಕ್ಕಳಲ್ಲಿ ತೂಕ ಹೆಚ್ಚಳ, ಬೊಜ್ಜು ಇತರೆ ಸಮಸ್ಯೆಗೆ ಇದು ಕಾರಣವಾಗಬಹುದು.