ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಯಾವ ರೀತಿ ಸರಕಾರ ನಡೆಸುತ್ತಿದೆ ಎಂದರೆ ಅದಕ್ಕೆ ನಿದರ್ಶನ ಎಂಬುವಂತೆ ಕ್ಯಾಬಿನೆಟ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು ಕಳೆದ 21 ತಿಂಗಳುಗಳಿಂದ ನಿರ್ವಹಿಸುತ್ತಿದ್ದ ಆಡಳಿತ ಸುಧಾರಣಾ ಇಲಾಖೆ ಅಸ್ತಿತ್ವದಲ್ಲೇ ಇಲ್ಲ ಎಂಬ ಮಾಹಿತಿ ಈಗ ಬಹಿರಂಗವಾಗಿದೆ.
ಈ ವರೆಗೂ ಧಲಿವಾಲ್, ಎನ್‌ಆರ್‌ಐ ವ್ಯವಹಾರಗಳ ಖಾತೆ ಜೊತೆಗೆ ಆಡಳಿತ ಸುಧಾರಣಾ ಇಲಾಖೆಯನ್ನೂ ನೀಡಲಾಗಿತ್ತು. ಆದರೆ ಆಡಳಿತ ಸುಧಾರಣಾ ಇಲಾಖೆ ಅಸ್ತಿತ್ವದಲ್ಲಿಲ್ಲದ ಕಾರಣ ಅವರಿಗೆ ಎನ್‌ಆರ್‌ಐ ವ್ಯವಹಾರಗಳ ಖಾತೆ ಮಾತ್ರ ಉಳಿದಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಗೆಜೆಟ್ ಅಧಿಸೂಚನೆಯನ್ನು ಉಲ್ಲೇಖಿಸಿ ವರದಿಯೊಂದು ಪ್ರಕಟವಾಗಿದೆ.
ಶುಕ್ರವಾರ ಹೊರಡಿಸಲಾದ ಸರ್ಕಾರಿ ಅಧಿಸೂಚನೆಯಲ್ಲಿ, ‘ಮಂತ್ರಿಗಳ ನಡುವೆ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ 23.09.24 ರಂದು ದಿನಾಂಕ 21/1/2022-2 ಕ್ಯಾಬಿನೆಟ್/2230 ರ ಪಂಜಾಬ್ ಸರ್ಕಾರಿ ಅಧಿಸೂಚನೆಯ ಭಾಗಶಃ ಮಾರ್ಪಾಡಿನಲ್ಲಿ, ಈ ಹಿಂದೆ ಕ್ಯಾಬಿನೆಟ್ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರಿಗೆ ಹಂಚಿಕೆ ಮಾಡಲಾದ ಆಡಳಿತ ಸುಧಾರಣಾ ಇಲಾಖೆಯು ಪ್ರಸ್ತುತ ಅಸ್ತಿತ್ವದಲ್ಲಿಲ್ಲ’ ಎಂದು ಹೇಳಲಾಗಿದೆ.
2023 ರ ಮೇ ತಿಂಗಳಲ್ಲಿ ನಡೆದ ಸಚಿವ ಸಂಪುಟ ಪುನರ್ರಚನೆಯಲ್ಲಿ ಧಲಿವಾಲ್ ಅವರಿಗೆ ಆಡಳಿತ ಖಾತೆಯನ್ನು ನೀಡಲಾಗಿತ್ತು. ಕೃಷಿ ಮತ್ತು ರೈತರ ಕಲ್ಯಾಣ ಖಾತೆಯಿಂದ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಎನ್‌ಆರ್‌ಐ ವ್ಯವಹಾರಗಳ ಖಾತೆಯನ್ನು ಉಳಿಸಿಕೊಂಡಿದ್ದರು. ಕೃಷಿ ಮತ್ತು ರೈತರ ಕಲ್ಯಾಣ ಖಾತೆಯನ್ನು ಗುರ್ಮೀತ್ ಸಿಂಗ್ ಖುಡಿಯನ್ ಅವರಿಗೆ ನೀಡಲಾಗಿತ್ತು.
ಏತನ್ಮಧ್ಯೆ, ವಿರೋಧ ಪಕ್ಷಗಳು ಶನಿವಾರ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಎಎಪಿ ಸರ್ಕಾರ ಆಡಳಿತದ ಬಗ್ಗೆ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ.
ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ, ;ಅಸ್ತಿತ್ವದಲ್ಲಿಲ್ಲದ ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ ಎಂಬುದು ಸರ್ಕಾರದ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ. ಅದನ್ನು ಹಂಚಿಕೆ ಮಾಡಿದವರಿಗೂ ಅಥವಾ ಇಲಾಖೆಯನ್ನು ಹಂಚಿಕೆ ಮಾಡಿದವರಿಗೂ ಈ ಇಲಾಖೆ ಅಸ್ತಿತ್ವದಲ್ಲಿಲ್ಲ ಎಂಬ ಅಂಶ ತಿಳಿದಿರಲಿಲ್ಲ; ಎಂದು ಟೀಕಿಸಿದ್ದಾರೆ.
ಶಿರೋಮಣಿ ಅಕಾಲಿ ದಳದ ನಾಯಕಿ ಮತ್ತು ಬಟಿಂಡಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಕೂಡ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.