ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸುದೀರ್ಘ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಾಂಪ್ರದಾಯಿಕ ‘ಜಟ್ಟಿ ಕಾಳಗ’ (ವಜ್ರಮುಷ್ಟಿ ಕಾಳಗ) ರದ್ದಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸಾರ್ವಜನಿಕರ ಆತಂಕಕ್ಕೆ ತೆರೆ ಎಳೆದಿದ್ದಾರೆ. “ಜಟ್ಟಿ ಕಾಳಗ ರದ್ದಾಗಿದ್ದರಿಂದ ನಾಡಿಗೆ ಯಾವುದೇ ಕೆಡುಕು ಸಂಭವಿಸುವುದಿಲ್ಲ. ಈ ವಿಚಾರದಲ್ಲಿ ಯಾರೂ ಅನಗತ್ಯವಾಗಿ ಆತಂಕ ಪಡಬೇಕಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾವು ಜ್ಯೋತಿಷ್ಯ ನಂಬಲ್ಲ, ದೇವರನ್ನು ನಂಬುತ್ತೇವೆ
ಜಟ್ಟಿ ಕಾಳಗ ರದ್ದಾದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಅಪಾರ್ಥ ಹಾಗೂ ಜ್ಯೋತಿಷ್ಯದ ಲೆಕ್ಕಾಚಾರಗಳು ಕೇಳಿಬರುತ್ತಿರುವ ಬೆನ್ನಲ್ಲೇ ರಾಜಮಾತೆ ನೇರ ಮಾತುಗಳಲ್ಲಿ ಉತ್ತರಿಸಿದ್ದಾರೆ. “ನಾವು ದೇವರನ್ನು ಸಂಪೂರ್ಣವಾಗಿ ನಂಬುತ್ತೇವೆ ಆದರೆ ಜ್ಯೋತಿಷ್ಯವನ್ನಲ್ಲ. ಜ್ಯೋತಿಷ್ಯ ನಂಬಿ ನಾವು ಎಂದಿಗೂ ಪೂಜೆ ಪುನಸ್ಕಾರಗಳನ್ನು ಮಾಡುವುದಿಲ್ಲ. ಅರಮನೆಯ ಧಾರ್ಮಿಕ ವಿಧಿವಿಧಾನಗಳು ಆಯಾ ನಿಗದಿತ ಮುಹೂರ್ತದಲ್ಲೇ ನಡೆಯಬೇಕು. ಮುಹೂರ್ತ ಮೀರಿ ನಾವು ಯಾವುದನ್ನೂ ನಡೆಸುವುದಿಲ್ಲ. ಅಂದು ಮುಹೂರ್ತದ ಸಮಯದ ಕಾರಣಕ್ಕಾಗಿಯೇ ಜಟ್ಟಿ ಕಾಳಗಕ್ಕೂ ಮುನ್ನ ವಿಜಯಯಾತ್ರೆ ನಡೆಸಬೇಕಾಯಿತು” ಎಂದು ಅವರು ವಿವರಣೆ ನೀಡಿದ್ದಾರೆ. ಈ ಘಟನೆಯ ಸಂಪೂರ್ಣ ವರದಿಯನ್ನು ತರಿಸಿಕೊಳ್ಳುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಪೂರ್ಣ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ.
ಅಂಬಾರಿ ಆನೆ ‘ಪ್ರಶಾಂತ’ನ ಬಗ್ಗೆ ಇತ್ತು ಆತಂಕ
ಇದೇ ಸಂದರ್ಭದಲ್ಲಿ ಜಂಬೂಸವಾರಿಯ ನೇತೃತ್ವ ವಹಿಸಿದ್ದ ಅಂಬಾರಿ ಆನೆ ‘ಪ್ರಶಾಂತ’ನ ಕುರಿತು ರಾಜಮಾತೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. “ಈ ಹಿಂದೆ ಎಂದೂ ನನಗೆ ಆನೆಗಳ ಬಗ್ಗೆ ಆತಂಕ ಕಾಡಿರಲಿಲ್ಲ. ಆದರೆ ಈ ಬಾರಿ ಮಾತ್ರ ಪ್ರಶಾಂತ ಆನೆ ಮೊದಲ ಬಾರಿಗೆ ಅಂಬಾರಿ ಹೊರಡಬೇಕಿದ್ದರಿಂದ ಮನಸ್ಸಿನಲ್ಲಿ ತೀವ್ರ ಆತಂಕವಿತ್ತು. ಆತ ಯಾವ ರೀತಿ ಅಂಬಾರಿ ಕಟ್ಟಿಸಿಕೊಳ್ಳುತ್ತಾನೋ, ಹೇಗೆ ಹೆಜ್ಜೆ ಇಡುತ್ತಾನೋ ಎಂಬ ಭಯವಿತ್ತು. ಆದರೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಎಲ್ಲಾ ಆತಂಕಗಳನ್ನು ಮೀರಿ ಪ್ರಶಾಂತ ಅತ್ಯಂತ ಯಶಸ್ವಿಯಾಗಿ ಮತ್ತು ಗಾಂಭೀರ್ಯದಿಂದ ಅಂಬಾರಿ ಹೊತ್ತಿದ್ದಾನೆ. ಇದು ನನಗೆ ತೀವ್ರ ಸಂತಸ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದರು.



