ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ಕಾರ್ಯಕ್ರಮ ಮುಗಿದ ಬಳಿಕ ವಧುವನ್ನು ವರನ ಮನೆಗೆ ಬೀಳ್ಕೊಡುವ ಕಾರ್ಯಕ್ರಮ ಕೂಡ ನೆರವೇರಿತ್ತು. ಮದುವೆಯ ಮರುದಿನ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು. ಈ ವೇಳೆ ಒಂದು ಅವಾಂತರವಾಗಿದೆ. ಅದೇನೆಂದರೆ ವಿವಾಹವಾದ ಬಳಿಕ ವಧುವಿನ ತಂದೆ ಹಾಕಿದ ಮೂರು ಷರತ್ತು ಕೇಳಿ ವರ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾನೆ.
ಹೌ ಈ ಷರತ್ತುಗಳನ್ನು ಕೇಳಿದ ವರ ಆರತಕ್ಷತೆ ವೇದಿಕೆಯಿಂದಲೇ ನಿನ್ ಮಗಳೇ ಬೇಡ ಎಂದು ಎಸ್ಕೇಪ್ ಆಗಿದ್ದಾನೆ. ನನಗೆ ಈ ಮದುವೆಯ ಅಗತ್ಯವೇ ಇಲ್ಲ ಎಂದು ವರ ಹೇಳಿದ್ದಾನೆ ಎನ್ನಲಾಗಿದೆ.
ಈ ಘಟನೆ ನಡೆದಿರುವುದು ಝಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಬರುವಾಸಾಗರ್ ನಗರದಲ್ಲಿ. ಮನ್ವೇಂದ್ರ ಸೇನ್ ಮತ್ತು ಗುರ್ಸರಾಯ್‌ನ ಇಟೋರಾ ಗ್ರಾಮದ ಯುವತಿಯ ಮದುವೆ ಕಾರ್ಯಕ್ರಮ ಕಳೆದ ಜೂನ್ 6 ರಂದು ನಡೆದಿದೆ. ಅದ್ಧೂರಿಯಾಗಿಯೇ ವಿವಾಹ ಕಾರ್ಯಕ್ರಮ ಜರುಗಿದೆ. ಕೊನೆಯಲ್ಲಿ ವಧು-ವರರನ್ನು ಬೀಳ್ಕೊಡಬೇಕು ಎನ್ನುವಷ್ಟರಲ್ಲಿ ಹುಡುಗಿಯ ತಂದೆ ಮೂರು ಷರತ್ತು ವಿಧಿಸಿದ್ದು, ಇದನ್ನು ಕೇಳಿ ಅಲ್ಲಿದ್ದವರೆಲ್ಲ ಒಂದು ಕ್ಷಣ ಕಂಗಾಲಾಗಿ ಹೋಗಿದ್ದಾರೆ.
ಏನಿದು ಮೂರು ಷರತ್ತು?
1. ಮದುವೆಯ ನಂತರ, ವಧು ಮತ್ತು ವರ ದೈಹಿಕ ಸಂಬಂಧ ಮಾಡಬಾರದು
2. ಹುಡುಗಿಯ ತಂಗಿ ಕೂಡ ತನ್ನ ಅಕ್ಕನೊಂದಿಗೆ ಅಲ್ಲಿಯೇ ಇರುತ್ತಾಳೆ.
3. ಮಗಳ ಮನೆಗೆ ನಾನು(ವಧುವಿನ ತಂದೆ) ಯಾವಾಗ ಬೇಕಾದರೂ ಬರಬಹುದು. ಈ ವೇಳೆ ಯಾರೂ ತಡೆಯಬಾರದು
ಎಂದು ಮದುವೆ ಹೆಣ್ಣಿನ ತಂದೆ ವಧು-ವರರ ಬೀಳ್ಕೊಡುಗೆ ಸಮಯದಲ್ಲಿ ಮೂರು ಷರತ್ತು ವಿಧಿಸಿದ್ದಾರೆ.
ಮೊದಲ ಷರತ್ತು ಕೇಳಿದ ವರನಿಗೆ ಒಂದು ಕ್ಷಣ ಆಶ್ಚರ್ಯವಾಗಿದೆ. ಇಂತಹ ವಿಚಿತ್ರ ಷರತ್ತು ಯಾಕೆ ಎಂದು ಕೇಳಿದಾಗ ವಧುವಿನ ತಂದೆ ಏನೂ ಉತ್ತರಿಸದೆ ಷರತ್ತು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಷರತ್ತಿನ ಬಗ್ಗೆ ಎರಡೂ ಕುಟುಂಬಗಳ ನಡುವೆ ಸಾಕಷ್ಟು ಮಾತುಕತೆ ನಡೆದಿದೆ. ಅಂತಿಮವಾಗಿ ವರನ ಷರತ್ತುಗಳನ್ನು ನಿರಾಕರಿಸಿದ್ದಾನೆ. ಇತ್ತು ವಧು ಕೂಡ ತನ್ನ ತಂದೆಯ ಮಾತಿಗೆ ಒಪ್ಪಿಗೆ ಸೂಚಿಸಿದ್ದಾಳೆ. ಕೊನೆಗೆ ವಧು ಇಲ್ಲದೆ ವರ ತನ್ನ ಮನೆಗೆ ಮರಳಿದ್ದಾನೆ.
ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವರನ ಕುಟುಂಬಸ್ಥರು ಸಾಕಷ್ಟು ಮೌಲ್ಯದ ಚಿನ್ನಾಭರಣ ವಧುವಿಗೆ ನೀಡಿದ್ದಾರೆ. ಘಟನೆಯ ಬಳಿಕ ಆಭರಣವನ್ನು ಹಿಂತಿರುಗಿಸದೆ ವಧು ತನ್ನ ತಂದೆಯೊಂದಿಗೆ ಹೋಗಿದ್ದಾಳೆ. ಈ ಬಗ್ಗೆ ಹುಡುಗನ ಕಡೆಯವರು ಬರುವಸಾಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಅಜ್ಮೀರ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ.