ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಬ್ಜಿ ಗೇಮ್ ಆಡಬೇಡವೆಂದು ತಡೆದ ತಾಯಿಗೆ ಹದಿಹರೆಯದ ಹುಡುಗ ಗುಂಡಿಕ್ಕಿ ಕೊಂದು ವಿಕೃತಿ ಮೆರೆದಿರುವ ಘಟನೆಯೊಂದನ್ನು ಮೂಲಗಳು ವರದಿ ಮಾಡಿವೆ.
ತನ್ನ ಮಗ ನಿರಂತರವಾಗಿ ಪಬ್ಜಿ ಗೇಮ್ ಆಡುತ್ತಿರುವುದನ್ನು ಗಮನಿಸಿದ ತಾಯಿ ಆತನಿಗೆ ಆಟವಾಡಿದ್ದು ಸಾಕು ಎಂದು ತಡೆದಿದ್ದಾಳೆ ಇದರಿಂದ ಕುಪಿತಗೊಂಡ ಮಗರಾಯ ಪರವಾನಗಿಯಿರುವ ತನ್ನ ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿ ಆಕೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ. ಅದೂ ಅಲ್ಲದೇ ಅವಳು ಜೀವಂತವಾಗಿದ್ದಾಳೆಯೇ ಅಥವಾ ಸತ್ತಿದ್ದಾಳೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸಿದ್ದಾನೆ.
ಪೋಲೀಸರ ವರದಿಯ ಪ್ರಕಾರ ಆತ ಹೀಗೆ ಮೂರು ದಿನಗಳ ಕಾಲ ಗಾಯಗೊಂಡ ತಾಯಿಯನ್ನು ಬಂಧಿಸಿಟ್ಟಿದ್ದ. ಗುಂಡಿಕ್ಕಿದ ಮಾರನೇ ದಿನವೂ ಆಕೆ ಅಲ್ಪ ಪ್ರಮಾಣದಲ್ಲಿ ಉಸಿರಾಡುತ್ತಿದ್ದಳು ಎಂದು ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ತಾಯಿಗೆ ಗುಂಡು ಹಾರಿಸಿ ಕೊಂದ ನಂತರ ತನ್ನ ತಂಗಿಯನ್ನು ಇನ್ನೊಂದು ಕೋಣೆಯಲ್ಲಿ ಕೂಡಿಹಾಕಿದ್ದಾನೆ.
ತನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ಶವ ವಿಲೇವಾರಿ ಮಾಡಲು ಸಹಾಯ ಮಾಡುವಂತೆ ಗನ್ ತೋರಿಸಿ ಬೆದರಿಸಿದ್ದಾನೆ. ಜೊತೆಗೆ ಆತನಿಗೆ 5,000ರೂ ಹಣ ನೀಡಿ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ತಾಕೀತು ಮಾಡಿದ್ದ ಎನ್ನಲಾಗಿದೆ.