ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯಾರ್ಥಿಗಳ ಪ್ರತಿಭಟನೆಯ ಆಕ್ರೋಶಕ್ಕೆ ಮಣಿದು ಬಾಂಗ್ಲಾದೇಶ ಪ್ರಧಾನಿ ಹುದ್ದೆಗೆ ಶೇಕ್ ಹಸೀನಾ ಸೋಮವಾರ ರಾಜೀನಾಮೆ ನೀಡಿದ್ದು, ದೇಶದಿಂದಲೇ ಕಾಲ್ಕಿತ್ತಿದ್ದಾರೆ. ಇದರಿಂದ ಭಾರತದ ನೆರೆಯ ರಾಷ್ಟ್ರದಲ್ಲಿ ಅರಾಜಕತೆ ತಲೆದೋರಿದ್ದು, ಜಗದ್ವಿಖ್ಯಾತ ಉಡುಪು ಬ್ರ್ಯಾಂಡ್‌ಗಳು ಕಂಗಾಲಾಗಿವೆ.
ಬಾಂಗ್ಲಾದೇಶ ಗಾರ್ಮೆಂಟ್ಸ್ ಉದ್ಯಮಕ್ಕೆ ಜಗದ್ವಿಖ್ಯಾತವಾಗಿದ್ದು, ದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದ ಗಾರ್ಮೆಂಟ್ಸ್ ಘಟಕಗಳೆಲ್ಲ ಬಾಗಿಲೆಳೆದುಕೊಂಡಿವೆ. ಇಲ್ಲಿನ ಬಾಂಗ್ಲಾದೇಶ ಗಾರ್ಮೆಂಟ್ ತಯಾರಕರು ಮತ್ತು ರಫ್ತುದಾರರ ಸಂಘ (ಬಿಜಿಎಂಇಎ) ಎಲ್ಲಾ ಘಟಕಗಳ ಬಂದ್‌ಗೆ ಕರೆ ನೀಡಿದೆ. ಇದು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಚಿಂತೆಗೀಡು ಮಾಡಿದೆ. ಬಾಂಗ್ಲಾದೇಶದಾದ್ಯಂತ ಎಲ್ಲಾ ಗಾರ್ಮೆಂಟ್ ಫ್ಯಾಕ್ಟರಿಗಳು ಮುಚ್ಚಿರುವುದು ಜಾಗತಿಕ ದೈತ್ಯ ಬ್ರ್ಯಾಂಡ್‌ಗಳಾದ ಎಚ್‌ಆಂಡ್ಎಂ ( H&M), ಝಾರಾ( ZARA) ದಂತ ಉದ್ಯಮಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಬಿಬಿಸಿ ವರದಿ ಮಾಡಿದೆ.
ಸ್ವೀಡನ್ ಮೂಲದ ಕಂಪನಿ ಎಚ್‌ಆಂಡ್ಎಂ ಬಾಂಗ್ಲಾದೇಶದಲ್ಲಿ 1,000ಕ್ಕೂ ಹೆಚ್ಚು ಫ್ಯಾಕ್ಟರಿಗಳನ್ನು ಹೊಂದಿದೆ. ಇಲ್ಲಿಂದಲೇ ಬಟ್ಟೆಯನ್ನು ಪಡೆದು ಅದನ್ನು ಜಾಗತಿಕ ಮಟ್ಟದಲ್ಲಿ ಕಂಪನಿ ಮಾರಾಟ ಮಾಡುತ್ತಿದೆ. ಇನ್ನು ಸ್ಪೇನ್ ಮೂಲದ ಕಂಪನಿ ಝಾರಾ ಕೂಡ ಇದೇ ರೀತಿ ದೊಡ್ಡ ಮಟ್ಟದ ಉತ್ಪಾದನಾ ಘಟಕಗಳನ್ನು ಬಾಂಗ್ಲಾದೇಶದಲ್ಲಿ ಹೊಂದಿದೆ. ಕಂಪನಿ ಬಳಿ 12 ಕ್ಲಸ್ಟರ್‌ಗಳಿದ್ದು, ಇದರಲ್ಲಿ ಶೇ. 98ರಷ್ಟು ಉತ್ಪಾದನೆ ನಡೆಯುತ್ತಿರುವುದಾಗಿ 2022ರಲ್ಲಿ ಹೇಳಿತ್ತು. ಬಾಂಗ್ಲಾವೂ ಈ ಕ್ಲಸ್ಟರ್‌ಗಳಲ್ಲಿ ಒಂದು ಎಂದು ತಿಳಿಸಿತ್ತು. ಇದೀಗ ಎಲ್ಲವೂ ಸಂಕಷ್ಟದಲ್ಲಿದ್ದು, ಬಿಕ್ಕಟ್ಟು ಪರಿಹಾರಕ್ಕಾಗಿ ಎದುರು ನೋಡುತ್ತಿವೆ.