ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಟಿಪ್ಪರ್ ಡಿಕ್ಕಿಯಾಗಿ ಬೈಕ್ ಹಿಂಬದಿ ಕುಳಿತಿದ್ದ ಗರ್ಭಿಣಿ ಮೃತಪಟ್ಟಿದ್ದು, ಹೊಡೆತದ ರಭಸಕ್ಕೆ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ಹೊರಗಡೆ ಬಂದು ವಿಲ ವಿಲ ಒದ್ದಾಡಿ ಸಾವನ್ನಪ್ಪಿದೆ.
ಎಡೇಹಳ್ಳಿಯ ಸಿಂಚನಾ (30) ಮೃತದುರ್ದೈವಿ. ಸಿಂಚನಾ ಪತಿ ಮಂಜುನಾಥ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಅಪಘಾತದ ಬಳಿಕ ಸ್ಥಳದಲ್ಲೇ ಟಿಪ್ಪರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಚನಾಗೆ ಬರುವ ಆಗಸ್ಟ್ 17ಕ್ಕೆ 8 ಮುಗಿದು 9 ತಿಂಗಳು ತುಂಬುತ್ತಿತ್ತು. ಹೀಗಾಗಿ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ದಂಪತಿ ಬೈಕ್ ದಾಬಸ್ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮರಳಿ ತಮ್ಮೂರು ತೋಟನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು.
ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಆಗ ಸಿಂಚನಾ ಬೈಕ್ನಿಂದ ಕೆಳೆಗೆ ಬಿದ್ದಿದ್ದಾರೆ. ಬಳಿಕ ಟಿಪ್ಪರ್ ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳು ಮಗು ಹೊರಗೆ ಬಂದಿದೆ. ನಡು ರಸ್ತೆಯಲ್ಲೇ ಮಗು ವಿಲ ವಿಲ ಒದ್ದಾಡಿ ಮೃತಪಟ್ಟಿದೆ. ಮನಕಲಕುವ ಘಟನೆ ಕಂಡು ಸ್ಥಳೀಯರು ಕೂಡ ಕಣ್ಣೀರು ಹಾಕಿದ್ದಾರೆ. ಮೃತ ದೇಹದ ಮುಂದೆ ಪತಿ ಮಂಜುನಾಥ್ ಹಾಗೂ ಅತ್ತೆಯ ಆಕ್ರಂದನ ಮುಗಿಲು ಮುಟ್ಟಿದೆ.