October 9, 2026
Friday, October 9, 2026
spot_img

ಹಾರರ್ ಸಿನಿಮಾ ಗೆಲ್ಲಲು ದೆವ್ವ ನೋಡ್ಬೇಕಾ? ಹಿರಾನಿ ತರ್ಕಕ್ಕೆ ಕ್ಲಾಸ್ ತಗೊಂಡ ನೆಟ್ಟಿಗರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಯಶಸ್ವಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರಿಗೆ ಸೋಲು ಹೊಸತು. ಆದರೆ ಶಾರುಖ್ ಖಾನ್ ನಟನೆಯ ‘ಡಂಕಿ’ (Dunki) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದಕ್ಕೆ ಅವರು ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಕ್ರಮವಾಗಿ ವಿದೇಶಕ್ಕೆ ವಲಸೆ ಹೋಗುವ ಕಥಾಹಂದರ ಹೊಂದಿದ್ದ ಈ ಚಿತ್ರ, ಭಾರತದ ಬಹುಪಾಲು ಪ್ರೇಕ್ಷಕರಿಗೆ ಕನೆಕ್ಟ್ ಆಗಲಿಲ್ಲ. ಹಾಗಾಗಿಯೇ ಸಿನಿಮಾ ಸೋತಿತು ಎಂದು ಹಿರಾನಿ ವಾದಿಸಿದ್ದಾರೆ.

ಸಿದ್ದಾರ್ಥ್ ಆನಂದ್ ನೆನಪಿಸಿದ ಹಿರಾನಿ ಹೇಳಿಕೆ

ಹಿರಾನಿ ಅವರ ಈ ಮಾತುಗಳು ಈ ಹಿಂದೆ ‘ಫೈಟರ್’ ಸಿನಿಮಾ ಸೋತಾಗ ನಿರ್ದೇಶಕ ಸಿದ್ದಾರ್ಥ್ ಆನಂದ್ ಆಡಿದ್ದ ಮಾತನ್ನು ನೆನಪಿಸುವಂತಿದೆ. “ಭಾರತದ ಶೇ. 90 ರಷ್ಟು ಜನ ವಿಮಾನ ಏರಿಲ್ಲ, ಹಾಗಾಗಿ ಅವರಿಗೆ ಫೈಟರ್ ಅರ್ಥವಾಗಲಿಲ್ಲ” ಎಂದು ಸಿದ್ದಾರ್ಥ್ ಹೇಳಿದ್ದರು. ಈಗ ಹಿರಾನಿ ಕೂಡ ತಮ್ಮ ಚಿತ್ರದ ಲೋಪದೋಷಗಳನ್ನು ಮುಚ್ಚಿಕೊಳ್ಳಲು ಪ್ರೇಕ್ಷಕರನ್ನೇ ಹೊಣೆ ಮಾಡುತ್ತಿದ್ದಾರೆ ಎಂದು ಸಿನಿಪ್ರೇಕ್ಷಕರು ಕಿಡಿಕಾರಿದ್ದಾರೆ.

ನೆಟ್ಟಿಗರ ಆಕ್ರೋಶ ಮತ್ತು ತೀಕ್ಷ್ಣ ಪ್ರಶ್ನೆ

ಹಿರಾನಿ ಅವರ ಈ ತರ್ಕವನ್ನು ನೆಟ್ಟಿಗರು ಮತ್ತು ಚಿತ್ರ ವಿಮರ್ಶಕರು ತೀವ್ರವಾಗಿ ವಿರೋಧಿಸಿದ್ದಾರೆ. “ಯಾವುದೋ ಹಾರರ್ ಸಿನಿಮಾ ಹಿಟ್ ಆದ ತಕ್ಷಣ, ಸಿನಿಮಾ ನೋಡಿದವರೆಲ್ಲರಿಗೂ ನಿಜ ಜೀವನದಲ್ಲಿ ದೆವ್ವದ ಅನುಭವ ಆಗಿರುತ್ತದೆಯೇ?” ಎಂದು ಜನ ಪ್ರಶ್ನಿಸುತ್ತಿದ್ದಾರೆ. ಸಿನಿಮಾ ಗೆಲ್ಲಲು ಕಥೆ ಹೇಳುವ ಶೈಲಿ ಮತ್ತು ಭಾವನಾತ್ಮಕ ಆಳ ಮುಖ್ಯವೇ ಹೊರತು, ಪ್ರೇಕ್ಷಕರು ಅದನ್ನೇ ಅನುಭವಿಸಿರಬೇಕು ಎಂಬ ನಿಯಮವಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

Must Read