ಹಿಸ್ಟರಿ ವಾಹಿನಿಯಲ್ಲಿ ತುಳಸಿಗೌಡ ಕುರಿತ ಸಾಕ್ಷ್ಯಚಿತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ, ಪರಿಸರ ಪ್ರೇಮಿ, ರಾಜ್ಯದ ಹೆಮ್ಮೆಯ ತುಳಸಿ ಗೌಡರ ಸಾಧನೆ ಇದೀಗ ಹಿಸ್ಟರಿ ವಾಹಿನಿಯಲ್ಲಿ ರಾರಾಜಿಸುತ್ತಿದೆ. ಇಳಿವಯಸ್ಸಲ್ಲೂ ತುಳಸಿಗೌಡರ ಪರಿಸರ ಪ್ರೇಮ ಬಿತ್ತರಿಸುವ ಸಾಕ್ಷ್ಯ ಚಿತ್ರವನ್ನು ಹಿಸ್ಟರಿ ವಾಹಿನಿಯವರು ಪ್ರಸಾರ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ವಾಹಿನಿಯವರು ಈ ವಿಡಿಯೋದಲ್ಲಿ ಅರಣ್ಯ ವಿಶ್ವಕೋಶವನ್ನು ನೋಡಿ ಎಂದು ಶೀರ್ಷಿಕೆ ನೀಡಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಬಗ್ಗೆ ಈ ಸಾಕ್ಷ್ಯ ಚಿತ್ರದಲ್ಲಿ ವರ್ಣಿಸಲಾಗಿದೆ.  ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ! 1944ರಲ್ಲಿ ಹೊನ್ನಳ್ಳಿ ಗ್ರಾಮದ ಹಾಲಕ್ಕಿ ಸಮುದಾಯದಲ್ಲಿ ಜನಿಸಿದ ಈಕೆ ಬಡತನ ನೀಗಿಸಲು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಇದೇ ವೇಳೆ ಕಾಡಿನಲ್ಲಿ ಸಿಗುವ ಅನೇಕ ಮರಗಳ ಬೀಜಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಗೆ ನೀಡುತ್ತಾ ಅಲ್ಲಿ ದಿನಗೂಲಿ ಕೆಲಸಕ್ಕೆ ಸೇರಿಕೊಂಡರು.

ತಾವು ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ ಮನೆ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲು ಪ್ರಾರಂಭಸಿ ವರ್ಷಕ್ಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಇಂದು ದೊಡ್ಡ ಕಾಡನ್ನೇ ಸೃಷ್ಟಿ ಮಾಡಿದ್ದಾರೆ. ಈಕೆ ನೆಟ್ಟು ಪೋಷಿಸಿದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನ ಕೊಡುವ ಕೆಲಸ ಮಾಡುತ್ತಿವೆ. 72 ವರ್ಷವಾದರೂ ಈಗಲೂ ಪರಿಸರ ಪ್ರೇಮವನ್ನು ತೋರುತ್ತಿರುವ ಇವರು ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಈ ಎಲ್ಲ ಮಾಹಿತಿಗಳು ಇವರ ಜ್ಞಾನ ಭಂಡಾರದಲ್ಲಿದೆ.

ಇವರು ಹೆಚ್ಚಾಗಿ ಜನ, ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಯವಂತಹ ಮರಗಳನ್ನೇ ನೆಟ್ಟಿದ್ದಾರೆ. ಮಾವು, ಹಲಸು, ನೇರಳೆ, ಮತ್ತಿ, ಹತ್ತಿ, ಆಲ, ನೆಲ್ಲಿ, ನಂದಿ ಹೊನ್ನೆ, ತೇಗ, ಬೀಟೆ ಹೀಗೆ ನೂರಾರು ಬಗೆಯ ಮರಗಳು ಈ ತುಳಸಿ ಗೌಡರ ಕೈಯಲ್ಲಿ ಇಂದು ಭದ್ರವಾಗಿ ಬೇರೂರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!