ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಜನರು ತಮ್ಮ ತೂಕ ಇಳಿಸಿಕೊಳ್ಳಲು ವಿವಿಧ ಪ್ರಯತ್ನಗಳಿಗೆ ಮುಂದಾಗುತ್ತಾರೆ. ವ್ಯಾಯಾಮದೊಂದಿಗೆ ಆಹಾರ ಕ್ರಮದಲ್ಲಿ ಮುನ್ನೆಚ್ಚರಿಕೆಗಳನ್ನು ವಹಿಸುತ್ತಾರೆ. ಕೆಲವರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಹಾಲು ಕುಡಿಯುತ್ತಾರೆ. ಇನ್ನು ಕೆಲವರು ಇದರಲ್ಲಿ ಕೊಬ್ಬಿನಂಶವಿದೆ ಎಂದು ಸೇವಿಸುವುದಿಲ್ಲ. ವೇಟ್ ಲಾಸ್ ಮಾಡಿಕೊಳ್ಳುವವರಿಗೆ ಹಾಲು ತುಂಬಾ ಉಪಯುಕ್ತವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನಿಮ್ಮ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ನಿಯಮಿತವಾಗಿ ಹಾಲು ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಹಾಲಿನಲ್ಲಿ ಅಧಿಕ ಪ್ರೋಟೀನ್ ಇದೆ. ವಿಶ್ರಾಂತಿ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಪ್ರೋಟೀನ್ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಹಾರ ಕ್ರಮಗಳನ್ನು ಪಾಲಿಸುವ ಸಮಯದಲ್ಲಿ ದಿನಕ್ಕೆ ಅಗತ್ಯವಿರುವ ಪೋಷಕಾಂಶಗಳು ಕಡಿಮೆಯಾಗದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಹಾಲಿನಲ್ಲಿರುವ ಪೋಷಕಾಂಶಗಳು ಕೂಡ ಉಪಯುಕ್ತವಾಗಿವೆ ಎಂದು ತಜ್ಞರು ತಿಳಿಸುತ್ತಾರೆ.
ಒಂದು ಗ್ಲಾಸ್ ಹಸುವಿನ ಹಾಲು ಕುಡಿಯುವುದರಿಂದ 122 ಕ್ಯಾಲೋರಿ ಲಭಿಸುತ್ತದೆ. ಇದು 8.23 ಗ್ರಾಂ ಪ್ರೋಟೀನ್, 12 ಗ್ರಾಂ ಕಾರ್ಬೋಹೈಡ್ರೇಟ್ಸ್, 4.66 ಗ್ರಾಂ ಕೊಬ್ಬು, 309 ಮಿಲಿಗ್ರಾಂ ಕ್ಯಾಲ್ಸಿಯಂ, ಮೆಗ್ನೀಸಿಯಮ್ 29.4 ಮಿಲಿಗ್ರಾಂ, ಸತು 1.05 ಮಿಲಿಗ್ರಾಂ, ಫೋಲೇಟ್ 4.9 ಮೈಕ್ರೋಗ್ರಾಂ, ಕೋಲೀನ್ 44.6 ಮಿಲಿಗ್ರಾಂ, ಪೊಟಾಶಿಯಂ 390 ಮಿಲಿಗ್ರಾಂ, ವಿಟಮಿನ್ ಬಿ12 1.35 ಮೈಕ್ರೋಗ್ರಾಂ, ವಿಟಮಿನ್ ಎ 203 ಮೈಕ್ರೋಗ್ರಾಂ, ವಿಟಮಿನ್ ಡಿ 111 ಮೈಕ್ರೋಗ್ರಾಂ ಒಳಗೊಂಡಿರುತ್ತದೆ. ಮೂಳೆಗಳನ್ನು ಬಲಪಡಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ಚಯಾಪಚಯ ಕ್ರಿಯೆಯ ವೇಗ ಹೆಚ್ಚಿಸಲು ಹಾಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಕಡಿಮೆ ಕ್ಯಾಲೋರಿಯ ಆಹಾರ ಸೇವಿಸುವವರಿಗಿಂತ ದಿನಕ್ಕೆ ಮೂರು ಬಾರಿ ಡೈರಿ ಉತ್ಪನ್ನಗಳನ್ನು ಸೇವಿಸುವವರು ಹೆಚ್ಚು ತೂಕ ಕಳೆದುಕೊಳ್ಳಬಹುದು. ತೂಕ ಕಳೆದುಕೊಂಡ ಬಳಿಕ ತಮ್ಮ ಆಹಾರದಲ್ಲಿ ಹೆಚ್ಚು ಡೈರಿ ಉತ್ಪನ್ನಗಳನ್ನು ಸೇವಿಸುವವರಲ್ಲಿ ತೂಕ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಸೊಂಟದ ಸುತ್ತಲಿನ ಭಾಗದಲ್ಲಿರುವ ಕೊಬ್ಬು ಕೂಡ ಕಡಿಮೆಯಾಗುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂನೊಂದಿಗೆ, ಬೊಜ್ಜು, ಚಯಾಪಚಯ ಅಸ್ವಸ್ಥತೆಗಳು ಮತ್ತು ಮಧುಮೇಹದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಹಾಲಿನಲ್ಲಿ ಕೊಬ್ಬಿನಂಶವಿದೆ. ಹಸು ಹಾಲು ಮಾತ್ರವಲ್ಲ, ತೆಂಗಿನ ಹಾಲಿನಂತಹ ತರಕಾರಿ ಹಾಲಿನಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕೆನೆರಹಿತ ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ತಿಳಿಸುತ್ತದೆ. ಹಾಲಿನಲ್ಲಿ ಪ್ರೋಟೀನ್ ಜೊತೆಗೆ ಕೊಬ್ಬಿನಂಶ ಹೆಚ್ಚಿರುವುದರಿಂದ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಇದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ಸಹ ಕೆನೆರಹಿತ ಹಾಲನ್ನು ಸೇವನೆ ಮಾಡಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.