ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಾಲಿ ಧನಂಜಯ್ ಒಳ್ಳೆಯ ನಟ, ನಿರ್ಮಾಪಕ ಆಗಿರುವ ಜೊತೆಗೆ ಸಾಮಾಜಿಕ ಕಾಳಜಿ ಇರುವ ವ್ಯಕ್ತಿ. ಮುಂದಿನ ತಿಂಗಳು ವೈದ್ಯೆ ಧನ್ಯತಾ ಜೊತೆ ವಿವಾಹವಾಗುತ್ತಿರುವ ಡಾಲಿ ಧನಂಜಯ್, ಮದುವೆಗೆ ಮುಂಚೆ ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಕೊಂಡಿದ್ದಾರೆ.
ಡಾಲಿ ಧನಂಜಯ್ ಹುಟ್ಟೂರಿನಲ್ಲಿದ್ದ ಸರ್ಕಾರಿ ಶಾಲೆ ಹಳತಾಗಿತ್ತು, ಗೋಡೆಗಳು ಬಿರಕು ಬಿಟ್ಟಿದ್ದವು, ಛಾವಣಿ ಸೋರುತ್ತಿತ್ತು, ನೆಲ ಹಾಸು ಕಿತ್ತೇ ಹೋಗಿತ್ತು. ಇನ್ನೂ ಕೆಲವು ಸಮಸ್ಯೆಗಳು ಶಾಲೆಯಲ್ಲಿದ್ದವು. ಇದೀಗ ಡಾಲಿ ಧನಂಜಯ್ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯನ್ನು ನವೀಕರಣ ಮಾಡುತ್ತಿದ್ದಾರೆ.
ಡಾಲಿ ಧನಂಜಯ್ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ 1 ರಿಂದ 7 ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆ ತುಸು ಶಿಥಿಲಗೊಂಡಿತ್ತು. ಇದನ್ನು ಗಮನಿಸಿದ ಡಾಲಿ ಧನಂಜಯ್ ಇಡೀ ಶಾಲೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಶಾಲೆಯ ಶಿಥಿಲಗೊಂಡಿದ್ದ ಗೋಡೆ ಮತ್ತು ತಾರಸಿಗೆ ಚುರುಕಿ ಹಾಕಿಸುತ್ತಿದ್ದಾರೆ. ಶಿಥಿಲವಾಗಿದ್ದ ನೆಲ ಹಾಸನ್ನು ತೆಗೆಸಿ ಹೊಸ ಟೈಲ್ಸ್ ಹಾಕಿಸುತ್ತಿದ್ದಾರೆ. ಹಾಗೂ ಶಿಕ್ಷಕರ ಕೊಠಡಿಯನ್ನು ನವೀಕರಣಗೊಳಿಸುತ್ತಿದ್ದಾರೆ. ಗೇಟ್ ದುರಸ್ತಿ, ಕಾಂಪೌಂಡ್ ದುರಸ್ತಿ, ಇಡೀ ಶಾಲೆಗೆ ಬಣ್ಣ, ಶೌಚಾಲಯ ನವೀಕರಣ, ಹೊಸ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್, ಸುಸಜ್ಜಿತ ಅಡುಗೆ ಮನೆ ಇನ್ನಿತರೆಗಳನ್ನು ಡಾಲಿ ಧನಂಜಯ್ ಮಾಡಿಸಿಕೊಡುತ್ತಿದ್ದಾರೆ.