October 10, 2026
Saturday, October 10, 2026
spot_img

‘ಗ್ಯಾಂಗ್‌ಸ್ಟರ್ ವಿತ್ ಲ್ಯಾಪ್‌ಟಾಪ್ಸ್’: ಭಾರತೀಯ ಐಟಿ ಉದ್ಯೋಗಿಗಳನ್ನು ಹೀಯಾಳಿಸಿದ ಟ್ರಂಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಚೀನಾ ಮೂಲದ ವಲಸಿಗರ ವಿರುದ್ಧ ತಮ್ಮ ಕಟು ಟೀಕೆಗಳನ್ನು ಮುಂದುವರಿಸಿದ್ದಾರೆ. ಈ ಬಾರಿ ಅವರು ನೇರವಾಗಿ ಭಾರತೀಯ ಐಟಿ ವೃತ್ತಿಪರರು ಮತ್ತು ವಲಸಿಗ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಆಕ್ರೋಶ ಹೊರಹಾಕಿದ್ದು, ಇದು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

ಟ್ರಂಪ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣವಾದ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಬರೆದ ವಿವಾದಾತ್ಮಕ ಲೇಖನವೊಂದನ್ನು ಹಂಚಿಕೊಂಡಿದ್ದಾರೆ. ಈ ಲೇಖನದಲ್ಲಿ ಭಾರತ ಮತ್ತು ಚೀನಾವನ್ನು ಅತ್ಯಂತ ಕೆಟ್ಟದಾಗಿ ಚಿತ್ರಿಸಲಾಗಿದೆ. ಈ ದೇಶಗಳು ಕೇವಲ “ನರಕದ ಕೂಪಗಳು” ಮತ್ತು ಇವು “ನಾಗರಿಕತೆಯ ತೊಟ್ಟಿಲುಗಳಲ್ಲ” ಎಂದು ವಿವಾದಾತ್ಮಕವಾಗಿ ಬರೆಯಲಾಗಿದೆ.

ವಿಶೇಷವಾಗಿ ಅಮೆರಿಕದ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತ ಮತ್ತು ಚೀನಾದ ತಜ್ಞರನ್ನು ಟ್ರಂಪ್ ಈ ಪತ್ರದ ಮೂಲಕ “ಗ್ಯಾಂಗ್‌ಸ್ಟರ್ ವಿತ್ ಲ್ಯಾಪ್‌ಟಾಪ್ಸ್” ಎಂದು ಕರೆದಿದ್ದಾರೆ. ಇವರು ಅಮೆರಿಕದ ಉದ್ಯೋಗಗಳನ್ನು ಕಬಳಿಸುತ್ತಿದ್ದಾರೆ ಮತ್ತು ಇಲ್ಲಿನ ತಂತ್ರಜ್ಞಾನ ವ್ಯವಸ್ಥೆಯನ್ನು ಲೂಟಿ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಈ ವಲಸಿಗರು ಅಮೆರಿಕದ ಧ್ವಜವನ್ನು ಗೌರವಿಸುವುದಿಲ್ಲ ಎಂಬ ಹೀಯಾಳಿಕೆಯೂ ಪತ್ರದಲ್ಲಿದೆ.

ಅಮೆರಿಕದ ಸಂವಿಧಾನದಲ್ಲಿರುವ ‘ಜನ್ಮಸಿದ್ಧ ಪೌರತ್ವ’ದ ನಿಯಮವನ್ನು ಭಾರತೀಯರು ಮತ್ತು ಚೀನಿಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟ್ರಂಪ್ ದೂರಿದ್ದಾರೆ.

ಪ್ರವಾಸಿ ವೀಸಾದಲ್ಲಿ ಅಮೆರಿಕಕ್ಕೆ ಬಂದು ಇಲ್ಲಿ ಮಗುವಿಗೆ ಜನ್ಮ ನೀಡಲಾಗುತ್ತಿದೆ. ಆ ಮಗುವಿಗೆ ಸಿಗುವ ಅಮೆರಿಕದ ಪೌರತ್ವದ ಆಧಾರದ ಮೇಲೆ ಇಡೀ ಕುಟುಂಬ ಇಲ್ಲಿ ನೆಲೆಸುತ್ತಿದೆ. ಇದು ಅಮೆರಿಕದ ಮೂಲ ಸೌಕರ್ಯ ಮತ್ತು ಆರ್ಥಿಕತೆಯ ಮೇಲೆ ಹೊರೆಯಾಗುತ್ತಿದೆ ಎಂಬುದು ಟ್ರಂಪ್ ಅವರ ವಾದ.

ಟ್ರಂಪ್ ಅವರ ಈ ನಡೆ ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯ ಸಮುದಾಯದಲ್ಲಿ ಆತಂಕ ಮೂಡಿಸಿದೆ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಅಮೆರಿಕವನ್ನು ನಂಬಿರುವ ಭಾರತೀಯರಿಗೆ ಈ “ಗ್ಯಾಂಗ್‌ಸ್ಟರ್” ಎಂಬ ಪದಪ್ರಯೋಗ ಮತ್ತು “ನರಕದ ಕೂಪ” ಎಂಬ ಹೀಯಾಳಿಕೆ ತೀವ್ರ ಅಸಮಾಧಾನ ತರಿಸಿದೆ.

Must Read