ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಬಿಕ್ಕಟ್ಟು ಮತ್ತಷ್ಟು ತಾರಕಕ್ಕೇರಿದೆ. ಪ್ರಸ್ತಾವಿತ ಶಾಂತಿ ಒಪ್ಪಂದದ ನಿಯಮಗಳ ಕುರಿತು ಇರಾನ್ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ, ಹೊರ್ಮುಜ್ ಜಲಸಂಧಿಯಿಂದ ನಿರ್ಗಮಿಸುತ್ತಿದ್ದ ಭಾರತೀಯ ಹಡಗುಗಳನ್ನು ಗುರಿಯಾಗಿಸಿ ಇರಾನ್ ಪಡೆಗಳು ನಡೆಸಿರುವ ಡ್ರೋನ್ ದಾಳಿಯನ್ನು ಟ್ರಂಪ್ ಖಂಡಿಸಿದ್ದಾರೆ.
‘ಟ್ರೂತ್ ಸೋಷಿಯಲ್’ನಲ್ಲಿ ಟ್ರಂಪ್ ಆಕ್ರೋಶ:
ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ‘ಟ್ರೂತ್ ‘ನಲ್ಲಿ ಬರೆದುಕೊಂಡಿರುವ ಟ್ರಂಪ್, ಇರಾನ್ ಮಾಧ್ಯಮಗಳಿಗೆ ಸೋರಿಕೆ ಮಾಡಿರುವ ಒಪ್ಪಂದದ ನಿಯಮಗಳಿಗೂ, ಲಿಖಿತವಾಗಿ ಒಪ್ಪಿಕೊಂಡಿರುವ ನಿಯಮಗಳಿಗೂ ಯಾವುದೇ ಸಂಬಂಧವಿಲ್ಲ. ಇರಾನ್ ಅತ್ಯಂತ ಅಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದೆ. ಭಾರತೀಯ ಹಡಗುಗಳ ಮೇಲಿನ ಡ್ರೋನ್ ದಾಳಿ ತೀರ ಅಸ್ವೀಕಾರಾರ್ಹ. ಇರಾನ್ ತಕ್ಷಣವೇ ಬುದ್ಧಿ ಕಲಿಯಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ಇರಾನ್‌ಗೆ ಯಾವುದೇ ಹಣ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸ್ಪಷ್ಟನೆ:
ಯುಎಸ್ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಈ ಬಗ್ಗೆ ‘X’ ನಲ್ಲಿ ಪ್ರತಿಕ್ರಿಯಿಸಿದ್ದು, ಶಾಂತಿ ಒಪ್ಪಂದದ ಹೆಸರಲ್ಲಿ ಸಾಕಷ್ಟು ಸುಳ್ಳು ಮಾಹಿತಿ ಹರಡುತ್ತಿದೆ ಎಂದಿದ್ದಾರೆ. ಒಪ್ಪಂದದ ಸಭೆಗೆ ಬಂದ ತಕ್ಷಣ ಅಥವಾ ಸಹಿ ಹಾಕಿದ ತಕ್ಷಣ ಇರಾನ್‌ಗೆ ಯಾವುದೇ ಹಣ ಬಿಡುಗಡೆಯಾಗುವುದಿಲ್ಲ. ಇರಾನ್ ತನ್ನ ಜವಾಬ್ದಾರಿಗಳನ್ನು ಪೂರೈಸಿದರೆ ಮಾತ್ರ ಆರ್ಥಿಕ ಸೌಲಭ್ಯಗಳು ಸಿಗಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್‌ನ ಕರಡು ಒಪ್ಪಂದ ಮತ್ತು ಮಿಲಿಟರಿ ಬೆಳವಣಿಗೆ:
ಇದಕ್ಕೂ ಮುನ್ನ ಇರಾನ್ ಮಾಧ್ಯಮಗಳು ಬಿಡುಗಡೆ ಮಾಡಿದ್ದ ಕರಡು ವರದಿಯಲ್ಲಿ, 30 ದಿನಗಳಲ್ಲಿ ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವುದು, ಇರಾನ್‌ನ 24 ಶತಕೋಟಿ ಡಾಲರ್ ಮುಟ್ಟುಗೋಲು ಆಸ್ತಿ ಬಿಡುಗಡೆ ಹಾಗೂ ಪರಮಾಣು ಮಾತುಕತೆಗೆ 60 ದಿನಗಳ ಕಾಲಾವಕಾಶ ಕೋರಲಾಗಿತ್ತು. ಆದರೆ ಜಿನೆವಾದಲ್ಲಿ ವೀಕೆಂಡ್‌ನಲ್ಲಿ ನಡೆಯಬೇಕಿದ್ದ ಒಪ್ಪಂದದ ಸಭೆಯನ್ನು ಇರಾನ್ ತಿರಸ್ಕರಿಸಿದೆ. ಮತ್ತೊಂದೆಡೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ (IRGC) ಪಡೆಗಳು ಬಹ್ರೇನ್, ಕುವೈತ್ ಮತ್ತು ಜೋರ್ಡಾನ್‌ನಲ್ಲಿರುವ ಯುಎಸ್ ಮಿಲಿಟರಿ ನೆಲೆಗಳ ಮೇಲೆ ಪ್ರತಿಕಾರ ದಾಳಿ ನಡೆಸಿರುವುದಾಗಿ ಹೇಳಿಕೊಂಡಿವೆ.
ನವದೆಹಲಿ ತೀವ್ರ ಪ್ರತಿಭಟನೆ:
ಮತ್ತೊಂದೆಡೆ, ಹೊರ್ಮುಜ್ ಜಲಸಂಧಿಯ ಬಳಿ ಇತ್ತೀಚೆಗೆ ಅಮೆರಿಕ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮೂವರು ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದ ಘಟನೆಯನ್ನು ಭಾರತ ಸರ್ಕಾರ ಈಗಾಗಲೇ ತೀವ್ರವಾಗಿ ಖಂಡಿಸಿದೆ. ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು ವಿರೋಧಿಸಿ ಭಾರತವು ಅಮೆರಿಕದ ವಿರುದ್ಧ ನವದೆಹಲಿಯಲ್ಲಿ ತೀವ್ರ ಪ್ರತಿಭಟನೆ ನಡೆಸಿದೆ. ಇದರ ಬೆನ್ನಲ್ಲೇ ಈಗ ಇರಾನ್ ಕೂಡ ಭಾರತೀಯ ಹಡಗುಗಳ ಮೇಲೆ ದಾಳಿ ಮಾಡಿದೆ ಎಂದು ಟ್ರಂಪ್ ಆರೋಪಿಸಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ.



