ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಹಂತ ತಲುಪಿದೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಇನ್ನೂ ಅಧಿಕೃತವಾಗಿ ಗೆದ್ದವರು ಯಾರು ಎಂದು ಘೋಷಿಸಿಲ್ಲ, ಬಹುತೇಕ ಫಲಿತಾಂಶ ನಿರ್ಧಾರವಾಗಿರುವುದರಿಂದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದ್ದಾರೆ.
ಇದು ಹಿಂದೆಂದೂ ಯಾರೂ ನೋಡದ ಚಳವಳಿ. ನಾನೂ, ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳವಳಿ ಎಂದು ನಾನು ನಂಬುತ್ತೇನೆ. ಈ ದೇಶದ ಜನತೆಗೆ ಜೊತೆಗೆ ನಾನು ಯಾವತ್ತಿಗೂ ಇರುತ್ತೇನೆ. ನಾವು ನಮ್ಮ ಗಡಿಗಳನ್ನು ಸರಿಪಡಿಸಲು ಹೊರಟಿದ್ದೇವೆ, ನಮ್ಮ ದೇಶದ ವಿಚಾರಗಳನ್ನು ಸರಿಪಡಿಸಬೇಕಿದೆ. ನಾವು ಇಂದು ಇತಿಹಾಸವನ್ನು ನಿರ್ಮಿಸಿದ್ದೇವೆ, ಯಾರೂ ಯೋಚಿಸದ ಅಡೆತಡೆಗಳನ್ನು ನಾವು ಜಯಿಸಿದ್ದೇವೆ. ನಾವು ಹೆಚ್ಚಿನದನ್ನು ಸಾಧಿಸಿದ್ದು, ರಾಜಕೀಯ ಗೆಲುವಾಗಿದೆ ಎಂದರು.
ಶ್ವೇತಭವನವನ್ನು ಗೆಲ್ಲಲು ಅಗತ್ಯವಿರುವ 270 ಚುನಾವಣಾ ಮತಗಳಲ್ಲಿ ಟ್ರಂಪ್ 267 ಎಲೆಕ್ಟೊರಲ್ ಮತಗಳನ್ನು ಈಗಾಗಲೇ ಗೆದ್ದಿದ್ದಾರೆ. ಇದೊಂದು ದೊಡ್ಡ ಕೆಲಸ. ಇದು ಪ್ರಪಂಚದ ಅತ್ಯಂತ ಪ್ರಮುಖ ಕೆಲಸ. ನಾನು ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ, ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಭರವಸೆಯಿಂದ ಟ್ರಂಪ್ ನುಡಿದರು.
ಚುನಾವಣಾ ಪ್ರಚಾರ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಸಾಕಷ್ಟು ಬಾರಿ ಹತ್ಯೆಯತ್ನ ನಡೆದಿತ್ತು, ಕೂದಲೆಳೆ ಅಂತರದಲ್ಲಿ ಅವರು ಬಚಾವಾಗಿದ್ದರು. ಅದನ್ನು ಸಹ ಇಂದಿನ ಭಾಷಣದಲ್ಲಿ ಟ್ರಂಪ್ ಪ್ರಸ್ತಾಪಿಸಿದರು. ದೇವರು ಒಂದು ಕಾರಣಕ್ಕಾಗಿ ನನ್ನ ಜೀವವನ್ನು ಉಳಿಸಿದನು. ಆ ಕಾರಣವು ನಮ್ಮ ದೇಶವನ್ನು ಉಳಿಸಲು ಮತ್ತು ಅಮೇರಿಕಾವನ್ನು ಶ್ರೇಷ್ಠತೆಗೆ ಮರುಸ್ಥಾಪಿಸಲು ಆಗಿತ್ತು. ಈಗ ನಾವು ಒಟ್ಟಾಗಿ ಆ ಮಿಷನ್ ನ್ನು ಪೂರೈಸಲಿದ್ದೇವೆ ಎಂದರು.