ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ತಿಮ್ಮಪ್ಪನ ದರುಶನಕ್ಕೆ ಗಂಟೆಗಟ್ಟಲೆ ಕಾಯುವ ಅಭ್ಯಾಸ ಹೊಸದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಶ್ವಿನಿ ಆಸ್ಪತ್ರೆಯ ಬಳಿ ಕಾಣುತ್ತಿರುವ ಭಕ್ತರ ಸಾಲು ಮಾತ್ರ ವಿಭಿನ್ನ ಕಾರಣಕ್ಕೆ ಗಮನ ಸೆಳೆದಿದೆ. ದರ್ಶನ ಟಿಕೆಟ್‌ಗಾಗಿ ರಕ್ತದಾನ ಮಾಡುವ ಕಾರ್ಯಕ್ಕೆ ಬೇಡಿಕೆ ಏರಿಕೆಯಾಗುತ್ತಿದ್ದಂತೆ, ಟಿಟಿಡಿ ಈಗ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ನಿಯಮಿತತೆ ತರಲು ಮುಂದಾಗಿದೆ.
ವೈಕುಂಠ ದ್ವಾರ ದರ್ಶನದ ಹಿನ್ನೆಲೆಯಲ್ಲಿ ಭಕ್ತರ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ, ಡಿಸೆಂಬರ್ 30 ರಿಂದ ಜನವರಿ 8ರವರೆಗೆ ವಿಶೇಷ ವ್ಯವಸ್ಥೆ ಕೈಗೊಂಡಿರುವ ಟಿಟಿಡಿ, ಲಕ್ಕಿ ಡಿಪ್ ಮೂಲಕ ಟೋಕನ್ ನೀಡುವ ವಿಧಾನವನ್ನು ಅಶ್ವಿನಿ ಆಸ್ಪತ್ರೆಯಲ್ಲೂ ಆರಂಭಿಸಿದೆ. ಬೆಳಿಗ್ಗೆ 8 ರಿಂದ 8.30ರೊಳಗೆ ಬರುವ ಭಕ್ತರನ್ನು ಲಕ್ಕಿ ಡಿಪ್ ವ್ಯವಸ್ಥೆಯಲ್ಲಿ ಸೇರಿಸಲಾಗುತ್ತಿದೆ. ನಂತರ 9 ಗಂಟೆಗೆ ಆಯ್ಕೆ ಮಾಡಲಾಗುವ ಐದು ಭಕ್ತರಿಗೆ ಮಾತ್ರ ರಕ್ತ ಪರೀಕ್ಷೆಗಳ ಬಳಿಕ ರಕ್ತ ತೆಗೆದುಕೊಂಡು ದರ್ಶನ ಟೋಕನ್ ನೀಡಲಾಗುತ್ತದೆ.
ಇತ್ತೀಚೆಗೆ ರಾತ್ರಿಯಿಂದಲೇ ಕ್ಯೂ ನಿಂತು ಕಾಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ, ಮೊದಲು ಬಂದವರಿಗೆ ಮೊದಲಿನ ಟಿಕೆಟ್ ವ್ಯವಸ್ಥೆ ಅನುಸರಿಸಲು ಸಾಧ್ಯವಾಗುತ್ತಿಲ್ಲ. ವೈದ್ಯಕೀಯ ತಪಾಸಣೆಯ ನಂತರ ಮಾತ್ರ ರಕ್ತದಾನಕ್ಕೆ ಅವಕಾಶ ನೀಡುತ್ತಿರುವ ಟಿಟಿಡಿ, ಗಂಭೀರ ಆರೋಗ್ಯ ಸಮಸ್ಯೆಗಳಿರುವ ಭಕ್ತರನ್ನು ವಿನಯಪೂರ್ವಕವಾಗಿ ಹಿಂತಿರುಗಿಸುತ್ತಿದೆ.

