ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ: ಬೆಳಗಾವಿಯಲ್ಲಿ ಜುಲೈ 9ರಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ರಾಷ್ಟ್ರೀಯ ಮಟ್ಟದ ಬೈಠಕ್ಗೆ ಸೂಕ್ತ ಕಾನೂನು ದಾಖಲೆಗಳಿಲ್ಲದೆ ಅನುಮತಿ ನೀಡಬಾರದು ಎಂದು ಹುಬ್ಬಳ್ಳಿಯ ಸಾಮಾಜಿಕ ಕಾರ್ಯಕರ್ತ ಶಿವಾನಂದ ಮುತ್ತಣ್ಣವರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ನೂತನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಂಘಟನೆಯ ಕಾನೂನುಬದ್ಧ ನೋಂದಣಿ ಹಾಗೂ ಆರ್ಥಿಕ ಪಾರದರ್ಶಕತೆಯ ಕುರಿತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವಂತೆ ಕೇಳಿದ್ದರು.
ದೇಶದ ಎಲ್ಲ ಎನ್‌ಜಿಒ, ಟ್ರಸ್ಟ್‌ಗಳು ಹಾಗೂ ಸಾಮಾಜಿಕ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಮತ್ತು ಹಣಕಾಸು ಸಂಬಂಧಿತ ನಿಯಮಗಳನ್ನು ಪಾಲಿಸುತ್ತಿರುವಾಗ, ಆರ್ಎಸ್ಎಸ್ಗೆ ಮಾತ್ರ ಏಕೆ ವಿನಾಯಿತಿ ಎಂಬ ಪ್ರಶ್ನೆ ಮಾಡಲಾಗಿದೆ.
ಸಾವಿರಾರು ಮಂದಿ ಭಾಗವಹಿಸುವ ಬೃಹತ್ ಸಭೆಗಳು ಮತ್ತು ಮೆರವಣಿಗೆಗಳ ಸಂದರ್ಭದಲ್ಲಿ ಯಾವುದೇ ಭದ್ರತಾ ಲೋಪ ಸಂಭವಿಸಿದರೆ ಅದರ ಹೊಣೆಗಾರಿಕೆ ಯಾರ ಮೇಲಿದೆ ಹಾಗೂ ಕಾರ್ಯಕ್ರಮದ ಆಯೋಜಕರಾಗಿ ಜವಾಬ್ದಾರಿಯುತ ಕಾನೂನುಬದ್ಧ ಘಟಕ ಯಾವುದು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕೆಂದು ಎಂದಿದ್ದಾರೆ.
ಇದನ್ನೂ ಓದಿ:
“ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಆರ್‌ಎಸ್‌ಎಸ್ ತನ್ನ ಕಾನೂನುಬದ್ಧ ನೋಂದಣಿ ಹಾಗೂ ಅಗತ್ಯ ದಾಖಲೆಗಳನ್ನು ಬಹಿರಂಗಪಡಿಸುವವರೆಗೆ ಬೆಳಗಾವಿ ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಆಯುಕ್ತರು ಜುಲೈ 9ರಿಂದ ಆರಂಭವಾಗಲಿರುವ ಮೂರು ದಿನಗಳ ರಾಷ್ಟ್ರೀಯ ಬೈಠಕ್‌ಗೆ ಅನುಮತಿ ನೀಡಬಾರದು” ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಬೆಳಗಾವಿ ವಿಭಾಗೀಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಈ ವೇಳೆ ಶಿವಾನಂದ ಮುತ್ತಣ್ಣವರ, ಬಸವರಾಜ್ ಅಗಸಿಮಣ್ಣಿ, ಕಪ್ಪರಪ್ಪ ಗೂರಗುಡ್ಡಿ, ಸೇರಿದಂತೆ ಇತರರು ಇದ್ದರು.



