September 27, 2026
Sunday, September 27, 2026
spot_img

ಮರಾಠಿ ಭಾಷೆ ಹೆಸರಲ್ಲಿ ಗೂಂಡಾಗಿರಿ ಬೇಡ: ಆಟೋ ಚಾಲಕರ ನೆರವಿಗೆ ಬಂದ ಸಿಎಂ ಫಡ್ನವೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದಲ್ಲಿ ಭಾಷಾ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. “ರಾಜ್ಯದಲ್ಲಿ ಮರಾಠಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯಕ, ಆದರೆ ಭಾಷೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಅಥವಾ ಹಿಂಸಾಚಾರದಲ್ಲಿ ತೊಡಗುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ,” ಎಂದು ಅವರು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಥಾಣೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಚೇರಿಯ ಮುಂಭಾಗದಲ್ಲಿ ಮರಾಠಿಯೇತರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಎಚ್ಚರಿಕೆ ನೀಡುವ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಇದು ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಶಾಂತಿ ಮತ್ತು ಸೌಹಾರ್ದತೆಯ ಮಂತ್ರ ಜಪಿಸಿದ್ದಾರೆ.

“ಮುಂಬೈನಂತಹ ಮಹಾನಗರಗಳಲ್ಲಿ ಮರಾಠಿ ಭಾಷೆಯನ್ನು ಪ್ರಚಾರ ಮಾಡುವುದು ತಪ್ಪಲ್ಲ, ಆದರೆ ಅದನ್ನು ಜವಾಬ್ದಾರಿಯುತವಾಗಿ ಮಾಡಬೇಕು,” ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಭಾಷಾ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಒಂದು ವಿಶಿಷ್ಟ ನಿರ್ಧಾರ ಕೈಗೊಂಡಿದೆ. ಮರಾಠಿ ತಿಳಿಯದ ಚಾಲಕರಿಗೆ ದಂಡ ಹಾಕುವ ಅಥವಾ ಹಿಂಸೆ ನೀಡುವ ಬದಲು, ಅವರಿಗೆ ಮರಾಠಿ ಭಾಷಾ ತರಬೇತಿ ನೀಡಲು ಸರ್ಕಾರ ಮುಂದಾಗಿದೆ.

ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮೇ 1 ರಿಂದ ರಾಜ್ಯಾದ್ಯಂತ ಆಟೋ ಮತ್ತು ಟ್ಯಾಕ್ಸಿ ಚಾಲಕರ ಮರಾಠಿ ಭಾಷಾ ಪ್ರಾವೀಣ್ಯತೆಯನ್ನು ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

ಸರ್ಕಾರದ ಈ ಕ್ರಮವು ಭಾಷಾ ಪ್ರೇಮವನ್ನು ಉಳಿಸುವ ಜೊತೆಗೆ, ಪರಭಾಷಾ ಕಾರ್ಮಿಕರ ಮೇಲೆ ನಡೆಯುವ ಹಲ್ಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ರಚನಾತ್ಮಕ ಹೆಜ್ಜೆಯಾಗಿದೆ. ಭಾಷೆಯನ್ನು ಕಲಿಸುವುದು ಮತ್ತು ಜಾರಿಗೆ ತರುವುದು ಸಂಘರ್ಷದ ಹಾದಿಯಾಗಬಾರದು ಎಂಬುದು ಸರ್ಕಾರದ ಸ್ಪಷ್ಟ ನಿಲುವಾಗಿದೆ.

Must Read