July 5, 2026
Sunday, July 5, 2026
spot_img

ಭಾರತೀಯ ಸೇನೆಯ ಚಕ್ರವ್ಯೂಹದಲ್ಲಿ ಲಷ್ಕರ್ ಭಯೋತ್ಪಾದಕರು: ಜಮ್ಮು-ಕಾಶ್ಮೀರದಲ್ಲಿ ಜಂಟಿ ಆಪರೇಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೀಮಂದಾರ್ ಹಾಗೂ ಸೈದ್ಪೋರಾ ಪ್ರದೇಶದ ದಟ್ಟವಾದ ಹಣ್ಣಿನ ತೋಟಗಳಲ್ಲಿ ಭದ್ರತಾ ಪಡೆಗಳು ಮತ್ತು ಲಷ್ಕರ್-ಎ-ತೊಯ್ಬಾ (LeT) ಉಗ್ರರ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ. ಉಗ್ರರು ತಪ್ಪಿಸಿಕೊಳ್ಳದಂತೆ ಭಾರತೀಯ ಸೇನೆ, ಜಮ್ಮು-ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ (CRPF) ಪಡೆಗಳು ಇಡೀ ಪ್ರದೇಶವನ್ನು ಸೂಕ್ಷ್ಮವಾಗಿ ಸುತ್ತುವರೆದಿವೆ.

ಬಲೆಯಲ್ಲಿ ಸಿಲುಕಿದ ‘A++’ ಕೆಟಗರಿ ಉಗ್ರ

ಸೇನೆಯ ಚಕ್ರವ್ಯೂಹದಲ್ಲಿ ಸಿಲುಕಿರುವ ಇಬ್ಬರು ಉಗ್ರರನ್ನು ಕುಲ್ಗಾಮ್ ಮೂಲದ ಜಕೀರ್ ಅಹ್ಮದ್ ಗಣೈ ಮತ್ತು ಲತೀಫ್ ಭಟ್ ಎಂದು ಗುರುತಿಸಲಾಗಿದೆ. ಇವರಲ್ಲಿ ಜಕೀರ್ ಗಣೈ ‘A++’ ವರ್ಗದ ಅತ್ಯಂತ ಅಪಾಯಕಾರಿ ಉಗ್ರನಾಗಿದ್ದು, 2025ರ ಪಹಲ್ಗಾಮ್ ದಾಳಿ ಸೇರಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಎನ್‌ಐಎ (NIA) ನ್ಯಾಯಾಲಯ ಈತನ ವಿರುದ್ಧ ನೋಟಿಸ್ ಜಾರಿ ಮಾಡಿತ್ತು. ಶುಕ್ರವಾರ ರಾತ್ರಿ ಇವರ ಚಲನವಲನಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಶನಿವಾರ ಸೇನೆ ದಾಳಿ ನಡೆಸಿದಾಗ ಇವರು ತೋಟದೊಳಗೆ ಪರಾರಿಯಾಗಿದ್ದರು.

ತಂತ್ರಜ್ಞಾನದ ಮೂಲಕ ಬಿಗಿ ಕಾವಲು

ದಟ್ಟವಾದ ತೋಟಗಳು ಉಗ್ರರಿಗೆ ರಕ್ಷಣೆ ನೀಡುತ್ತಿರುವುದರಿಂದ, ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯ ವಿಶೇಷ ವಿಭಾಗವಾದ ‘ವಿಕ್ಟರ್ ಫೋರ್ಸ್’ ರಂಗಕ್ಕಿಳಿದಿದೆ. ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದ್ದು, ರಾತ್ರಿ ವೇಳೆ ಉಗ್ರರು ಓಡಿಹೋಗದಂತೆ ಹೈ-ಪವರ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಸದ್ಯ ಡ್ರೋನ್‌ಗಳು ಮತ್ತು ಥರ್ಮಲ್ ಇಮೇಜಿಂಗ್ ಕ್ಯಾಮೆರಾಗಳ ಮೂಲಕ ಇಡೀ ಪ್ರದೇಶದ ಮೇಲೆ ತೀವ್ರ ನಿಗಾ ಇಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !